ರಸ್ತೆ ಬದಿಯ ಗಿಡಗಳ ಮರೆತ ಅರಣ್ಯ ಇಲಾಖೆ

ಹುಳಿಯಾರು:

     ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ಅರಣ್ಯ ಇಲಾಖೆ ಸಂಪೂರ್ಣ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ನಾನಾ ಬಗೆಯ ಗಿಡಗಳು ಇನ್ನೂ ಬೆಳವಣಿಗೆ ಹಂತದಲ್ಲಿವೆ. ನಿಷ್ಕಾಳಜಿಯ ಕಾರಣ ಬಿಸಿಲು ಮತ್ತು ದನಕರುಗಳ ದಾಳಿಗೆ ಒಳಗಾಗಿವೆ.

      ಹಸಿರೀಕರಣ ಯೋಜನೆ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಈ ಯೋಜನೆಗೆ ಪೂರಕವಾಗಿ ಹುಳಿಯಾರಿನಿಂದ ಯಳನಾಡು ಗ್ರಾಮದ ವರೆವಿಗೂ ನೆಡುತೋಪು ನಿರ್ಮಿಸಿತ್ತು. ಆದರೆ ನಿರ್ವಹಣೆ ಇಲ್ಲದೇ ಹಾಕಿರುವ ಗಿಡಗಳು ಒಣಗುತ್ತಿದ್ದು, ಖರ್ಚು ಮಾಡಿರುವ ಹಣ ವ್ಯರ್ಥವಾಗಿದೆ.

       ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಸರಕಾರ ಉದ್ದೇಶಿಸಿ ನೌಕರರನ್ನು ನಿಯೋಜಿಸಿತ್ತು. ದಿನಗೂಲಿ ಆಧಾರದಲ್ಲಿ ನೇಮಕವಾಗಿದ್ದ ಸಿಬ್ಬಂದಿ, ಅಧಿಕಾರಿಗಳು ನಿಯೋಜಿಸಿರುವ ಜಾಗಗಳಲ್ಲಿ ಗಿಡ ನೆಟ್ಟು ಪೋಷಣೆ ಮಾಡಬೇಕು. ಆದರೆ ಈ ಕೆಲಸಕ್ಕೆ ನಿರ್ಲಕ್ಷ್ಯಿಸಿರುವುದರಿಂದ ಯೋಜನೆ ಹಳ್ಳ ಹಿಡಿದಿದೆ.

       ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕದೆ ನಿರ್ಲಕ್ಷ್ಯಿಸಿರುವುದರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ಹಲವು ಸಸಿಗಳು ಸಂಪೂರ್ಣ ಒಣಗಿ ನಿಂತಿವೆ. ಸಸಿಗಳ ರಕ್ಷಣೆಗೆ ಹಾಕಿರುವ ತಡೆಬೇಲಿ ಕಿತ್ತಿಹೋಗಿವೆ. ಕೆಲವೊಂದು ಕಡೆ ಬೀಡಾಡಿ ದನಗಳಿಂದ ಸಸಿಗಳು ಅರ್ಧಕ್ಕೆ ಮುರಿದಿವೆ.

       ಅತ್ತ ದಾರಿ ಹೋಕರಿಗೆ ನೆರಳಿನ ಕೊಡೆಯಂತಿರುತ್ತಿದ್ದ ರಸ್ತೆ ಬದಿಯ ಗಿಡಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇತ್ತ ಮರಗಿಡಗಳ ರಕ್ಷಣೆ ಮತ್ತು ಪೋಷಣೆಯ ಹೊಣೆ ಹೊತ್ತ ಅರಣ್ಯ ಇಲಾಖೆ ಮಾತ್ರ ನೆಟ್ಟ ಸಸಿಗಳ ಬಗ್ಗೆ ಮುತುವರ್ಜಿ ವಹಿಸದೆ ಒಣಗಲು ಬಿಟ್ಟು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

         ಇನ್ನಾದರೂ ಅರಣ್ಯ ಇಲಾಖೆಯು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಮುಂದಾಗಬೇಕಿದೆ. ನೆಡ ತೋಪು ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂಧಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಹಾಕುವಂತೆಯೂ, ಕಿತ್ತು ಹೋಗಿರುವ ಬೆಲಿಯನ್ನು ಸರಿಪಡಿಸುವಂತೆಯೂ ನಿರ್ದೇಶನ ನೀಡಬೇಕಿದೆ. ಈ ಮೂಲಕ ಸರಕಾರದ ಇಂತಹ ಯೋಜನೆಗಳು ಹಾಳಾಗದಂತೆ ತಡೆಯಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap