ರಾಷ್ಟ್ರವಾದ-ಜಾತಿವಾದಗಳ ನಡುವೆ ಚುನಾವಣೆ

ದಾವಣಗೆರೆ:

      ಪ್ರಸ್ತುತ ಲೋಕಸಭಾ ಚುನಾವಣೆಯು ರಾಷ್ಟ್ರೀಯವಾದ ಹಾಗೂ ಜಾತಿವಾದದ ಮಧ್ಯೆ ನಡೆಯುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ಲೇಷಿಸಿದ್ದಾರೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯವಾದವನ್ನು ಪ್ರತಿಪಾದಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಜಾತಿವಾದದ ಮೇಲೆ ರಾಜಕಾರಣ ಮಾಡುತ್ತಿವೆ. ಹೀಗಾಗಿ ಈ ಚುನಾವಣೆಯು ರಾಷ್ಟ್ರವಾದ ಹಾಗೂ ಜಾತಿವಾದದ ನಡುವಿನ ಸಂಘರ್ಷವಾಗಿದೆ ಎಂದರು.

       ಮಾಜಿ ಸಿಎಂ ಸಿದ್ದರಾಮಯ್ಯನವರು ನಾನು ಮೂವರು ಕುರುಬರಿಗೆ ಟಿಕೆಟ್ ಕೊಡಿಸಿದ್ದೇನೆ. ಈಶ್ವರಪ್ಪ ಒಬ್ಬ ಕುರುಬರಿಗೂ ಟಿಕೆಟ್ ಕೊಡಿಸಿಲ್ಲ. ಹೀಗಾಗಿ ಅವರಿಗೆ ಮಾನ-ಮರ್ಯಾದೆ ಇದ್ದರೇ, ರಾಜಕೀಯ ಸನ್ಯಾಸತ್ವ ಪಡೆಯಲಿ ಎಂದಿದ್ದಾರೆ. ಇನ್ನೂ ಮೈತ್ರಿಯ ಭಾಗವಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತ ಒಕ್ಕಲಿಗ ಸಮುದಾಯಕ್ಕೆ ಸೇರಿಲ್ಲ.

        ಹೀಗಾಗಿ ಒಕ್ಕಲಿಗರು ಜೆಡಿಎಸ್ ಕೈಬಿಡಬೇಡಿ ಎಂದಿದ್ದಾರೆ. ಇನ್ನೂ ಸಚಿವ ಜಮೀರ್ ಅಹ್ಮದ್ ಯಾವುದೇ ಕಾರಣಕ್ಕೂ ಮುಸ್ಲಿಮರು ಬಿಜೆಪಿಗೆ ವೋಟು ಹಾಕಬೇಡಿ ಎಂದಿದ್ದಾರೆ. ಹೀಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಜಾತಿಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದು, ಆ ಎರಡೂ ಪಕ್ಷಗಳು ಕಟ್ಟರ್ ಜಾತಿವಾದಿಗಳಾಗಿವೆ ಎಂದು ಆರೋಪಿಸಿದರು.

        ಜಾತಿವಾದ ಪ್ರತಿಪಾದಿಸುತ್ತಿರುವ ಮೈತ್ರಿ ನಾಯಕರಿಗೆ ಬಿಜೆಪಿ ಕೋಮುವಾದಿ ಪಕ್ಷ ಎಂದು ಜರೆಯಲು ಯಾವ ಮುಖವಿದೆ ಎಂದು ಪ್ರಶ್ನಿಸಿದ ಅವರು, ದಾವಣಗೆರೆ ಕ್ಷೇತ್ರದಲ್ಲಿ ಸೋಲುವ ಟಿಕೆಟ್ ಅನ್ನು ಕುರುಬರಿಗೆ ಕೊಡಿಸಿರುವುದು ಕುರುಬರ ಮೇಲಿನ ಪ್ರೀತಿಯೇ? ಎಂದು ಪ್ರಶ್ನಿಸಿದರು.

       ಸಂಗೊಳ್ಳಿ ರಾಯಣ್ಣ-ಕಿತ್ತೂರುರಾಣಿ ಚನ್ನಮ್ಮ ಅವರ ದೇಶಪ್ರೇಮದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ರಾಷ್ಟ್ರೀಯವಾದಿ ಹಾಗೂ ಹಿಂದೂಗಳ ಪ್ರತಿನಿಧಿಯೇ ಹೊರತು ಕುರುಬರ ಪ್ರತಿನಿಧಿಯಲ್ಲ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

      ಸಿದ್ದರಾಮಯ್ಯ ಹೇಳುವುದು ಒಂದೂ ಆಗಲ್ಲ. ಅವರು ಆಗಲ್ಲ ಎಂಬುದೆಲ್ಲವೂ ಆಗುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಆಗಲ್ಲ ಅಂದಿದ್ದರು ಆಗಲಿಲ್ಲವೇ?. ಕುಮಾರಸ್ವಾಮಿ ಅವರ ಅಪ್ಪನ ಆಣೆಗೂ ಮುಖ್ಯಮಂತ್ರಿಯಾಗಲ್ಲ ಅಂದಿದ್ದರು ಆಗಲಿಲ್ಲವೇ?. ಇತ್ತೀಚೆಗೆ ಸಿದ್ದರಾಮಯ್ಯನವರು ಒಂದು, ಮಾತಿಗೂ ಮತ್ತೊಂದು ಮಾತಿಗೂ ತಾಳೆಯೇ ಆಗುವುದಿಲ್ಲ ಎನ್ನುವುದಕ್ಕೆ ವಿಧಾನಸಭೆ ಚುನಾವಣೆಯ ನಂತರ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಹೊರಬಂದು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಿಲ್ಲ ಎಂದಿದ್ದರು. ಆದರೆ, ಈಗ ಮತ್ತೆ ಮುಂದೆ ಮುಖ್ಯಮಂತ್ರಿಯಾಗುವುದಾಗಿ ಹೇಳಿರುವುದೆ ಸಾಕ್ಷಿ ಎಂದರು.

      ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಜಾತಿವಾದಿಗಳಿಗೆ ಬೆಂಬಲ ನೀಡಲ್ಲ. ಜಾತಿವಾದಿಗಳನ್ನು ಜನತೆ ದೂರವಿಟ್ಟು ಬಹಳ ದೂರವಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 20ರಿಂದ 20 ಸ್ಥಾನ ಪಡೆದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ನೆರವಾಗಲಿದೆ ಎಂದು ಹೇಳಿದರು.

      ಸಿದ್ದರಾಮಯ್ಯನವರ ಸೊಕ್ಕಿನ ಮಾತಿಗೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ 37 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಅಲ್ಲದೆ, ಜನತೆ ಮುಖ್ಯಮಂತ್ರಿ ಸ್ಥಾನದಿಂದಲೇ ಕಿತ್ತು ಹಾಕಿದ್ದಾರೆ. ಹಿಂದುಳಿದ ವರ್ಗಗಳ ಚಾಂಪೇನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗಾಗಿ ಏನೇನು ಮಾಡಿದ್ದಾರೆಂಬುದರ ಪಟ್ಟಿ ಕೊಡಲಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದೇವೆಂಬುದರ ಪಟ್ಟಿಯನ್ನು ನಾವು ಕೊಡುತ್ತೇವೆಂದು ಸವಾಲು ಹಾಕಿದರು.

      ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಬಿ.ಎಂ.ಸತೀಶ್ ಕೊಳೆನಹಳ್ಳಿ, ಹೆಚ್.ಎಸ್.ಲಿಂಗರಾಜ್, ಜಿ.ಎಂ.ಸುರೇಶ್, ಎನ್.ರಾಜಶೇಖರ್, ಕೆ.ಹೇಮಂತಕುಮಾರ್, ಧನುಷ್ ರೆಡ್ಡಿ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link