ಹಾವೇರಿ
ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜುಲೈ 13 ರಂದು ಹಾವೇರಿ ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಜರುಗಲಿದೆ. ರಾಜೀಯಾಗಬಲ್ಲ ಪ್ರಕರಣಗಳನ್ನು ಸಾರ್ವಜನಿಕರು ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರೇಣುಕಾದೇವಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ರಾಷ್ಟ್ರೀಯ ಲೋಕ ಅದಾಲತ್ ಕುರಿತಂತೆ ಅವರು ಮಾಹಿತಿ ನೀಡಿದರು.
ವರ್ಷದಲ್ಲಿ ನಾಲ್ಕು ಲೋಕ ಅದಾಲತ್‍ಗಳನ್ನು ನಡೆಸಲಾಗುತ್ತದೆ. ಮೊದಲನೇ ಲೋಕ ಅದಾಲತ್ ಕಾರ್ಯಕ್ರಮ ಕಳೆದ ಮಾರ್ಚ್ 9 ರಂದು ನಡೆಸಲಾಗಿದೆ.
ಎರಡನೇ ಲೋಕ ಅದಾಲತ್ ಇದೇ ಜುಲೈ 13 ರಂದು ಆಯೋಜಿಸಲಾಗಿದೆ. ಮೂರನೇ ಲೋಕ ಅದಾಲತ್ ಸೆಪ್ಟೆಂಬರ್ 14 ಹಾಗೂ ನಾಲ್ಕನೇ ಲೋಕ ಅದಾಲತ್ ಡಿಸೆಂಬರ್ 14 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿವೆ. ತಾಲೂಕಾ, ಜಿಲ್ಲಾ ನ್ಯಾಯಾಲಯ ಒಳಗೊಂಡಂತೆ ದೇಶದ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಿಂದ ಕಕ್ಷಿದಾರರಿಗೆ ತ್ವರಿತ ನ್ಯಾಯದಾನ, ವಾದಿ ಮತ್ತು ಪ್ರತಿ ವಾದಿಗಳ ಹಣ, ಸಮಯ ಉಳಿಯುತ್ತದೆ, ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ತಿಳಿಸಿದರು.
ಕಳೆದ ಮಾರ್ಚ್-19 ಮಾಹೆಯಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ್ಲ 161 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 539 ಪ್ರಕರಣಗಳು ಸೇರಿ 700 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಜುಲೈ 13 ರಂದು ನಡೆಯುವ ಎರಡನೇ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 1727 ಪ್ರಕರಣಗಳನ್ನು ರಾಜೀ ಸಂಧಾನ್ಕಕಾಗಿ ಗುರುತಿಸಲಾಗಿದೆ. ಈ ಪ್ರಕರಣಗಳು ಅದಾಲತ್ ನಡೆಯುವ ವೇಳೆ 2000 ಸಂಖ್ಯೆ ತಲುಪಬಹುದು. ಈ ಕುರಿತಂತೆ ರಾಜೀ ಸಂಧಾನ ಮಾಡುವ ಪ್ರಕರಣವನ್ನು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ವಕೀಲರ ಸಭೆ ನಡೆಸಿ ತಿಳಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಾದ ತಮ್ಮ ಚಾಲ್ತಿ ಸಿವಿಲ್, ಬ್ಯಾಂಕ್, ಮೋಟಾರು ವಾಹನ ಕಾಯ್ದೆಯ, ಭೂ -ಸ್ವಾಧೀನ, ವೈವಾಹಿಕ ವ್ಯಾಜ್ಯಗಳು, ಎನ್.ಐ.ಆ್ಯಕ್ಟ(ಚೆಕ್ ಬೌನ್ಸ್), ಕಂದಾಯದ ಹಾಗೂ ರಾಜೀ ಅಗಬಲ್ಲ ಕ್ರಿಮಿನಲ್ ಕೇಸುಗಳನ್ನು ಹಾಗೂ ಪೂರ್ವ ವ್ಯಾಜ್ಯ ಕೇಸುಗಳನ್ನು ರಾಜೀ ಮಾಡಿಕೊಳ್ಳಬಹುದಾಗಿದೆ. ಈ ಕುರಿತಂತೆ ಸಾರ್ವಜನಿಕರು ತಮ್ಮ ವಕೀಲರೊಂದಿಗೆ ಲೋಕ ಅದಾಲತ್‍ನಲ್ಲಿ ರಾಜೀಗೆ ಮುಂದಾಗುವಂತೆ ತಿಳಿಸಿದರು.
ರಾಜೀಯಾಗ ಬಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲ ತಾವು ಮುಂದಾದರು ತಮ್ಮ ವಕೀಲರು ಅಡ್ಡಪಡಿಸಿದರೆ ಈ ಕುರಿತಂತೆ ನೇರವಾಗಿ ನ್ಯಾಯಾಧೀಶರನ್ನು ಭೇಟಿಯಾದರೆ ಎಲ್ಲ ಕಾನೂನಿನ ನೆರವನ್ನು ನೀಡಲಾಗುವುದು. ಆದ್ಯಾಗ್ಯೂ ಎಲ್ಲ ವಕೀಲರು ಲೋಕ ಅದಾಲತ್‍ನಲ್ಲಿ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಲು ಆಸಕ್ತಿ ಹೊಂದಿರುವುದರಿಂದ ತಾವು ರಾಜೀ ಸಂಧಾನಕ್ಕೆ ಮುಂದಾಗಿ ಎರಡು ಕಡೆಯ ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಸೌಹಾರ್ದಯುತವಾಗಿ ಪರಿಹಾರ ಪಡೆದುಕೊಂಡಲ್ಲಿ ಪಕ್ಷಗಾರರ ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗುತ್ತದೆ ಜೊತೆಗೆ ಉಭಯ ಪಕ್ಷಗಾರರ ಸಂಬಂಧಗಳಲ್ಲಿ ವಿಶ್ವಾರ್ಹತೆ ಹೊಂದಬಹುದು ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಇತ್ಯರ್ಥವಾದ ವ್ಯಾಜ್ಯಗಳ ಕುರಿತು ಪಕ್ಷಗಾರರು ಮೇಲ್ಮನವಿ ಸಲ್ಲಿಸಬಹುದು. ಆದರೆ ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.ಮಾಧ್ಯಮ ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀವಿದ್ಯಾ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








