ತುಮಕೂರು
ತುಮಕೂರು ನಗರದ ಉಪ್ಪಾರಹಳ್ಳಿ ಫ್ಲೈಓವರ್‍ನಿಂದ ಹಿಡಿದು ಶೆಟ್ಟಿಹಳ್ಳಿ ಅಂಡರ್ ಪಾಸ್ ವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಅಲ್ಲಿನ ಆಸ್ತಿದಾರರರಿಗೆ ಪರಿಹಾರ ಧನ ನೀಡುವ ಸಲುವಾಗಿ ಫೆ.19 ರಂದು ಕರೆಯಲಾಗಿದ್ದ ದರ ನಿರ್ಧರಣೆ ಸಭೆಯನ್ನು ಆ ಭಾಗದ ಕಾರ್ಪೊರೇಟರ್ ವಿಷ್ಣುವರ್ಧನ್ (ಪಕ್ಷೇತರ) ಅವರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಮುಂದೂಡಲಾಯಿತು.
ಈ ಪ್ರದೇಶದಲ್ಲಿರುವ ಆಸ್ತಿದಾರರಿಗೆ ಯಾವುದೇ ಮಾಹಿತಿಯನ್ನು ಪೂರ್ವಭಾವಿಯಾಗಿ ನೀಡಿಲ್ಲ. ಹೀಗಾಗಿ ಆಸ್ತಿದಾರರು ಬಂದಿಲ್ಲ. ಅಷ್ಟೇ ಅಲ್ಲದೆ ಆ ಭಾಗದ (30 ನೇ ವಾರ್ಡ್) ಕಾರ್ಪೊರೇಟರ್ ಆಗಿರುವ ತಮಗೇ ಫೆ.18 ರಂದು ಸಂಜೆ ಆಕಸ್ಮಿಕವಾಗಿ ಈ ಸಭೆಯ ಮಾಹಿತಿ ದೊರೆತಿದೆ. ವಾಸ್ತವತೆ ಹೀಗಿರುವುದರಿಂದ ಇಂದಿನ ಸಭೆಯನ್ನು ಮುಂದೂಡಬೇಕು. ಎಲ್ಲ ಆಸ್ತಿದಾರರಿಗೆ ಸೂಕ್ತವಾಗಿ ನೋಟೀಸ್ ನೀಡಿ, ಬಳಿಕ ಸಭೆಯನ್ನು ಕರೆಯಬೇಕೆಂದು ವಿಷ್ಣುವರ್ಧನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭೆಯು ಮುಂದೂಡಲ್ಪಟ್ಟಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಆದರೆ ಆಸ್ತಿದಾರರುಗಳೇ ಇರಲಿಲ್ಲ. ಇದನ್ನು ವಿಷ್ಣುವರ್ಧನ್ ಆಕ್ಷೇಪಿಸಿದರು. ಅಪರ ಜಿಲ್ಲಾಧಿಕಾರಿಗಳು ಇದನ್ನು ಒಪ್ಪಿ, ಅಲ್ಲೇ ಇದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ತಿದಾರರಿಗೆ ಸೂಕ್ತ ನೋಟೀಸನ್ನು ನೀಡಿ, ಮುಂದಿನ ದಿನಾಂಕ ನಿಗದಿಪಡಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸಭೆಯು ಮುಂದಕ್ಕೆ ಹೋಯಿತು.
ತುಮಕೂರು ನಗರದ ಬಿ.ಎಚ್.ರಸ್ತೆಯ ಭದ್ರಮ್ಮ ಸರ್ಕಲ್‍ನಿಂದ ಉಪ್ಪಾರಹಳ್ಳಿ ಫ್ಲೈಓವರ್ ಮುಖಾಂತರ ಶೆಟ್ಟಿಹಳ್ಳಿ ಅಂಡರ್‍ಪಾಸ್‍ವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಒಟ್ಟು 31477.25 ಚದರ ಅಡಿಗಳುಳ್ಳ ನಿವೇಶನಗಳನ್ನು ಹೊಸ ಭೂಸ್ವಾಧೀನ ಕಾಯ್ದೆ 2013 ರ ಕಲಂ 46 ಅನ್ವಯ ನೇರ ಖರೀದಿ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳು ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಫೆ.19 ರಂದು ಬೆಳಗ್ಗೆ 11 ಗಂಟೆಗೆ ಕರೆದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ