ಮಧುಗಿರಿ
ವಿಶೇಷ ವರದಿ : ರಾಜೇಂದ್ರ ಎಂ.ಎನ್
ಮಳೆಯ ನೀರು ಕೆರೆಗೆ ಹರಿಯಲಿ ಎಂಬ ಉದ್ದೇಶದಿಂದ ಈ ಹಿಂದೆ ನಿರ್ಮಿಸಿದ್ದ ರಾಯಗಾಲುವೆಯೊಂದು ಮಾಂಸದ ತ್ಯಾಜ್ಯಗಳಿಂದ ಕೂಡಿ ಕಸದ ಡಬ್ಬಿಯಾಗಿದ್ದು, ಅದರಲ್ಲಿ ಹಲವಾರು ತಿಂಗಳಿನಿAದ ಪ್ರತಿ ದಿನ ರಕ್ತ ಮಿಶ್ರಿತ ಕಲ್ಮಶದಿಂದ ಕೂಡಿದ ನೀರು ಹೊಳೆಯಾಗಿ ಹರಿಯುತ್ತಾ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡುಕೊಡುತ್ತಿದೆ.
ಪಟ್ಟಣದ ಎಲ್‌ಐಸಿ ಕಚೇರಿ ಹಾಗೂ ಡಿವೈಎಸ್‌ಪಿ ಕಚೇರಿಯ ಮಧ್ಯ ಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಈ ರಾಯಗಾಲುವೆಯು 14, 11, 2ನೇ ವಾರ್ಡಿಗೆ ಹೊಂದಿ ಕೊಂಡಿದೆ. ಇಲ್ಲಿ ಮೇಕೆ, ಕುರಿ, ಕೋಳಿ ಹಾಗೂ ದನಗಳ ಕಟಾವು ಮಾಡಿ ಮಾಂಸ ಮಾರಾಟ ಮಾಡುವ ಅಂಗಡಿಗಳಿವೆ. ಇವುಗಳಿಂದ ಪ್ರತಿ ದಿನ ಬರುವ ತ್ಯಾಜ್ಯವು ಪುರಸಭೆಯವರಿಂದ ಕ್ರಮವಾಗಿ ಶೇಖರಣೆಯಾಗದ ಪರಿಣಾಮ ರಾತ್ರಿ ಹೊತ್ತಿನಲ್ಲಿ ಚೀಲದಲ್ಲಿ ತುಂಬಿ ಈ ರಾಯಗಾಲುವೆಗೆ ಎಸೆಯಲಾಗುತ್ತಿದೆ.
ಈ ಪರಿಣಾಮದಿಂದಾಗಿ ಅಲ್ಲಲ್ಲಿ ಕಟ್ಟಿಕೊಂಡು ನೀರು ನಿಂತು ಸೂಳ್ಳೆಗಳು ಉತ್ಪತ್ತಿಯಾಗುತ್ತಿದೆ. ನೀರು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಅನೇಕ ರೋಗರುಜಿನಗಳು ಮತ್ತಷ್ಟು ಉಲ್ಬಣವಾಗುತ್ತಿದೆ. ರಸ್ತೆಯ ಪಕ್ಕದಲ್ಲಿಯೇ ಮಾಂಸದ ಅಂಗಡಿಗಳು ಹಾಗೂ ಮೋರಿ ಇರುವುದರಿಂದ ಸಾರ್ವಜನಿಕರಿಗೆ ಬಹಳ ಕಿರಿ ಕಿರಿಯಾಗುತ್ತಿದೆ. ಮಾಂಸ ಮತ್ತು ರಕ್ತದ ರುಚಿ ಕಂಡಿರುವ ನಾಯಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದ್ದು ಇವುಗಳಿಂದ ಅನೇಕ ಅಪಘಾತಗಳು ನಡೆದದ್ದುಂಟು.
ಈ ದೊಡ್ಡ ಮೋರಿಗೆ ತೋಟಗಾರಿಕೆ ಇಲಾಖೆ ಬಳಿಯ ಪಾವಗಡ ವೃತ್ತದ ಸಮೀಪವಿರುವ ದನಗಳ ಮಾಂಸದ ಕಟಾವು ಅಂಗಡಿಗಳ, ಎಲ್‌ಐಸಿ ಕಚೇರಿಯ ಸಮೀಪದ ಮಟನ್ ಮಾರ್ಕೆಟ್‌ನ ಹಾಗೂ ಕೋಳಿ ಮಾಂಸದ ತ್ಯಾಜ್ಯಗಳು ಈ ಮೋರಿ ಸೇರುತ್ತಿದೆ. ಆ ಅಂಗಡಿಗಳ ಸಮೀಪ ಇರುವ ತ್ಯಾಜ್ಯ ಸಂಗ್ರಹಾಗಾರಗಳು ತುಂಬಿ ಹೋಗಿದೆ ಅಂಗಡಿ ಮುಂಭಾಗದಲ್ಲಿನ ಸಣ್ಣ ಸಣ್ಣ ಮೋರಿಗಳು ಕಟ್ಟಿಕೊಂಡು ಹಲವು ತಿಂಗಳೆ ಕಳೆದರೂ ಶುಚಿಗೊಳಿಸಲು ಮಾತ್ರ ಪುರಸಭೆ ಅಧಿಕಾರಿಗಳು ಹೋಗಿಲ್ಲ.
ಇಲಾಖೆಯ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳಿಗೆ ಮುಂದಾಗಿಲ್ಲದಿರುವುದು ಸೋಜಿಗದ ಸಂಗತಿ. ಮಾಂಸ ಹಾಗೂ ಅದರಿಂದ ಉತ್ಪತ್ತಿಯಾದ ತ್ಯಾಜ್ಯ ಮತ್ತು ರಕ್ತ ಮಿಶ್ರಿತ ನೀರು ರಕ್ತದ ಹೊಳೆಯಾಗಿ ಪ್ರತಿದಿನ ಪಟ್ಟಣದ ಸಮೀಪವಿರುವ ಕಂಭತ್ತನಹಳ್ಳಿ, ಭಕ್ತರಹಳ್ಳಿಗಳ ಚರಂಡಿಗಳ ಮೂಲಕ ತೋಟಗಳಿಗೆ ಹರಿಯುತ್ತಿದೆ. ಹೆಚ್ಚು ಮಳೆಯಾದರೆ ಆ ನೀರು ಸಹ ತಾಲ್ಲೂಕಿನ ದೊಡ್ಡ ಕೆರೆಯಾದ ಬಿಜಾವರ ಕೆರೆಗೆ ತ್ಯಾಜ್ಯ ಮತ್ತು ನೀರು ಹಳ್ಳ ಸೇರುವ ಸಂಭವ ಹೆಚ್ಚು.
ಈ ಮೋರಿಯಲ್ಲಿ ಪ್ರತಿ ದಿನ ರಕ್ತ ಮಿಶ್ರಿತ ನೀರು ಹರಿಯುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಳೆ ಬಂದಾಗ ಮೋರಿಯ ನೀರು ಹಾಗೂ ಕಸ ಕಡ್ಡಿ, ಮೂಳೆ, ಮಾಂಸ, ರೆಕ್ಕೆ, ಪುಕ್ಕಗಳೆಲ್ಲವೂ ನಮ್ಮ ಮನೆಗಳನ್ನು ಆವರಿಸುತ್ತದೆ. ಇಲ್ಲಿ ವಾಸ ಮಾಡಲು ಕಷ್ಟಕರವಾಗಿದೆ. ಸೊಳ್ಳೆಗಳ ಕಾಟ ಹೆಚ್ಚಿದೆ. ಮಾಜಿ ಶಾಸಕ ಕೆ.ಎನ್ ರಾಜಣ್ಣನವರ ಅವಧಿಯಲ್ಲಿ ಕಾಲನಿ ಅಭಿವೃದ್ಧಿ ಕಂಡಿತು ಆದರೆ ಈಗ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿದೆ. ನಮಗೂ ನೋಡುವುದಕ್ಕೆ ಆಗುತ್ತಿಲ್ಲ. ಸ್ಥಳೀಯರಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆಸ್ಪತ್ರೆಯಲ್ಲಿ ನಮ್ಮನ್ನು ಕಂಡರೆ ಸಾಕು ಅಲ್ಲಿನ ಸಿಬ್ಬಂದಿ ನಮಗೆ ಬೇರೆ ಕಡೆ ಚಿಕಿತ್ಸೆಗಾಗಿ ಚೀಟಿ ಬರೆದುಕೊಡುತ್ತಿದ್ದಾರೆ ಎಂದು 14ನೆ ವಾರ್ಡಿನ ನಾಗರಿಕರು ತಮ್ಮ ಅಳಲು ತೋಡಿ ಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ