ದಾವಣಗೆರೆ:
ಕಷ್ಟ ಪಡುವುದಕ್ಕಿಂತ ಇಷ್ಟಪಟ್ಟು ಓದಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ `ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರೀಕ್ಷೆ ಎಂದರೆ ದೆವ್ವ, ಭೂತ, ಪಿಶಾಚಿಯಲ್ಲ. ನಿಮ್ಮೊಳಗಿನ ಜ್ಞಾನ ಪರೀಕ್ಷಿಸುವ ವ್ಯವಸ್ಥೆ ಅಷ್ಟೇ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಎಂದಾಕ್ಷಣ ಭಯಪಡುವ ಅವಶ್ಯಕತೆ ಇಲ್ಲ. ಬದಲಿಗೆ ಪಠ್ಯಪುಸ್ತಕಗಳನ್ನು ಇಷ್ಟ ಪಟ್ಟು ಓದುವ ಮೂಲಕ ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ಕಿವಿಮಾತು ಹೇಳಿದರು.
ಫೇಲಾದ ಕಾರಣಕ್ಕೆ, ಕಡಿಮೆ ಅಂಕ ಪಡೆದ ಮಾತ್ರಕ್ಕೆ ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಷ್ಕೃತ್ಯಕ್ಕೆ ಯಾರೂ ಕೈಹಾಕಬಾರದು. ಬದಲಿಗೆ ಜೀವ ದೊಡ್ಡದು ಎಂಬುದನ್ನು ಅರಿತು ಜೀವ ಕಳೆದುಕೊಳ್ಳದೆ, ಅದನ್ನು ಉಳಿಸಿಕೊಂಡು ನಪಾಸಾದವರು ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕಾಯಕ ನಿಷ್ಠೆ ಬೆಳೆಸಿಕೊಂಡು ಓದುವುದು ಮತ್ತು ಬರೆಯುವುದನ್ನೇ ಕಾಯಕವನ್ನಾಗಿಸಿಕೊಳ್ಳಬೇಕು. ನಿಮಗೆ ನೀವೇ ಸ್ಫೂರ್ತಿಯಾಗಿ, ಆತ್ಮವಿಶ್ವಾಸದ ಮೂಲಕ ನಿಮ್ಮೊಳಗಿರುವ ವಿಶೇಷ ಶಕ್ತಿಯನ್ನು ಬಡಿದೆಬ್ಬಿಸಬೇಕು ಎಂದ ಅವರು, ಪ್ರತಿದಿನ 15 ನಿಮಿಷ ಧ್ಯಾನ ಮಾಡುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ಯಾವುದೇ ವ್ಯಕ್ತಿಗೆ ಹಣ, ಜಾತಿ, ಧರ್ಮದಿಂದ ಸಮಾಜದಲ್ಲಿ ಬೆಲೆ ಸಿಗುವುದಿಲ್ಲ. ಶ್ರದ್ಧೆ, ಕಾಯಕ ನಿಷ್ಠೆ, ಪರೋಪಕಾರ ಗುಣ, ಪ್ರಾಮಾಣಿಕತೆಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಾಗ ಮಾತ್ರ ದೊಡ್ಡವರಾಗಲು ಸಾಧ್ಯ ಎಂದ ಅವರು, ಯಾರೂ ಸಹ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವ, ವರದಕ್ಷಿಣೆ ಕಿರುಕುಳ ನೀಡುವ ವ್ಯಕ್ತಿಗಳಾಗಬಾರದು. ಬದಲಿಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಪ್ರಾಚಾರ್ಯ ಹೆಚ್.ಕೆ.ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳು ನಿಮ್ಮೊಳಗಿರುವ ಆತ್ಮವಿಶ್ವಾಸವನ್ನು ಮತ್ತಷ್ಟು ವೃದ್ಧಿಸಿಕೊಂಡು. ನಿಶ್ಚಿತ ಗುರಿ ಹೊಂದಿ, ಅದನ್ನು ಸತತ ಪರಿಶ್ರಮ ಮತ್ತು ಛಲದಿಂದ ತಲುಪಲು ಮುಂದಾಗಬೇಕು. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತಿನಂತೆ ಪರೀಕ್ಷೆ ಬಂದಾಗ ತಯಾರಿಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ನಿತ್ಯವೂ ಓದುವ ಸಾಧನೆಯಲ್ಲಿ ತೊಡಗಿಸಿಕೊಂಡಿದರೆ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ ಎಂದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುದಾನಿತ ಪ್ರೌಢಶಾಲೆ ನೌಕರರ ಸಂಘದ ಅಧ್ಯಕ್ಷ ಕೆ.ಈಶಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಿ.ಆರ್. ಮರುಳಪ್ಪ, ಶಿಕ್ಷಕರುಗಳಾದ ಪಂಚಾಕ್ಷರಪ್ಪ, ಶಾಂತಕುಮಾರಿ, ಕು.ಮಾನಸ ಮತ್ತಿತರರು ಉಪಸ್ಥಿತರಿದ್ದರು.ಮ.ಗು. ಮುರುಗೇಂದ್ರಯ್ಯ ಕಾರ್ಯಕ್ರಮ ನಿರೂಪಿಸಿದರು.
ಗಣಿತ ವಿಷಯವಾರು ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಮಾರುತಿ ಪ್ರೌಢಶಾಲೆ ಶಿಕ್ಷಕ ಜಿ.ಪಂಚಾಕ್ಷರಿ, ಇಂಗ್ಲಿಷ್ ವಿಷಯವಾಧಾರಿತ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಮಹಿಳಾ ಸಮಾಜ ಪ್ರೌಢಶಾಲೆಯ ರಾಜಪ್ಪ ಎಸ್.ಪಿ, ವಿಜ್ಞಾನದ ಕುರಿತು ವಿಜಯಕುಮಾರ್.ಎಚ್ ಉಪನ್ಯಾಸ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ