ನಾಯಕರ ನಿದ್ದೆ ಕೆಡೆಸಿರುವ ಬಂಡಾಯ

 ಕಾಂಗ್ರೆಸ್‍ಗ್ಗಿಂತ ಬಿಜೆಪಿಯಲ್ಲೇ ಹೆಚ್ಚು ಬಂಡಾಯ

ದಾವಣಗೆರೆ:

   ಭಾರೀ ಕುತೂಹಲ ಕೆರಳಿಸಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯದ ಬಿಸಿ ತಗುಲಿದೆ. ಇದು ಎರಡೂ ಪಕ್ಷಗಳ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಬಂಡಾಯ ಶಮನಕ್ಕೆ ವರಿಷ್ಠರು ಹರಸಾಹಸ ಪಡುತ್ತಿದ್ದಾರೆ.ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಮತ್ತು ಕಳೆದ ಬಾರಿ 39 ಸದಸ್ಯರ ಬೆಂಬಲದೊಂದಿಗೆ ಪಾಲಿಕೆಯ ಆಡಳಿತ ನಡೆಸಿದ ಕಾಂಗ್ರೆಸ್‍ಗೆ ಈ ಪಾಲಿಕೆ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

    ಆದರೆ, ಈ ಎರಡೂ ಪಕ್ಷಗಳಲ್ಲೂ ಎದ್ದಿರುವ ಬಂಡಾಯದ ಕಿಡಿ ಎಲ್ಲಿ ಸ್ವಪಕ್ಷೀಯರನ್ನೇ ಸುಡಲಿದೆಯೋ ಎಂಬ ಆತಂಕ ಎರಡೂ ಪಕ್ಷಗಳ ಮುಖಂಡರಲ್ಲಿ ಮನೆ ಮಾಡಿದ್ದು, ಈ ಬಂಡಾಯದ ಕಿಡಿಯನ್ನು ಹೇಗಾದರೂ ಮಾಡಿ ಆರಿಸಬೇಕೆಂಬ ಕಾರಣಕ್ಕೆ, ಬಂಡಾಯ ಎದ್ದಿರುವವರ ಮನವೋಲಿಸಲು ಇಲ್ಲದ ಕಸರತ್ತು ನಡೆಸಿದ್ದಾರೆ.

     ತಮಗೆ ಸುಲಭವಾಗಿ ದಕ್ಕಬಹುದಾದ ಟಿಕೆಟ್ ತಪ್ಪಿಸಿ, ಕೆ.ಎಂ.ವೀರೇಶ್ ಅವರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಅಸಮಾಧಾನ ಗೊಂಡಿರುವ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್ ಬಂಡಾಯದ ಬಾವುಟ ಬೀಸಿ, 33ನೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ 34ನೇ ವಾರ್ಡ್‍ನಿಂದ ಬಿಜೆಪಿ ಟಿಕೆಟ್ ಪಡೆದಿರುವ ಮಂಜುನಾಥ ನಾಯ್ಕನ ವಿರುದ್ಧ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯ ವೀರೇಶ್ ಬಂಡಾಯದ ಬಾವುಟ ಬೀಸಿದ್ದಾರೆ.

     ಹಾಗೆಯೇ ವಾರ್ಡ್ 32ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ರೇಖಾ ಶ್ರೀನಿವಾಸ್ ಪೂಜಾರಿ ವಿರುದ್ಧ ಮಾಜಿ ಮೇಯರ್ ಉಮಾ ಪ್ರಕಾಶ್ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರೆ, 24ನೇ ವಾರ್ಡ್‍ನಿಂದ ಕಣಕ್ಕೆ ಇಳಿದಿರುವ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಕೆ.ಪ್ರಸನ್ನಕುಮಾರ್ ವಿರುದ್ಧ ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ಜಯಪ್ರಕಾಶ್ ಅಂಬರಕರ್ ಅವರ ಪುತ್ರ ಅತೀತ್ ಅಂಬರಕರ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

    ಹೋಟೆಲ್ ಉದ್ಯಮಿ ಬಿ.ಜೆ. ಅಜಯ್‍ಕುಮಾರ್ ಅವರು ಮೆರವಣಿಗೆಯಲ್ಲಿ ತೆರಳಿ ಪಿ.ಜೆ. ಬಡಾವಣೆ (ವಾರ್ಡ್ 17) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಇದೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಶ್ರೆಣಿಕ್ ಜೈನ್ ಕಣಕ್ಕೆ ಇಳಿದಿದ್ದಾರೆ.
39ನೇ ವಾರ್ಡ್‍ನಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಗೀತಾ ಡಿಳ್ಳೆಪ್ಪ ವಿರುದ್ಧ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಗುರುಸಿದ್ಧನಗೌಡ ಅವರ ಸೊಸೆ ಪ್ರೀತಿ ರವಿಕುಮಾರ್ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಬಂಡಾಯದ ಬಾವುಟ ಹಿಡಿದಿದ್ದಾರೆ. 10ನೇ ವಾರ್ಡ್‍ನಲ್ಲೂ ಯುವ ಮುಖಂಡ ಸಂತೋಷ್ ಪೈಲ್ವಾನ್, 7ನೇ ವಾರ್ಡ್‍ನಲ್ಲಿ ಶ್ರೀಕಾಂತ ನೀಲಗುಂದ, 8ನೇ ವಾರ್ಡ್‍ನಿಂದ ಚೇತನಾ ಶಿವಕುಮಾರ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ.

     ಇನ್ನೂ ಕಾಂಗ್ರೆಸ್ ಪಕ್ಷಕ್ಕೂ ಬಂಡಾಯದ ಬಿಸಿ ತಟ್ಟಿದ್ದು, ಮತ್ತೆ ಪಾಲಿಕೆಯನ್ನು ವಶಪಡಿಸಿಕೊಳ್ಳಬೇಕೆಂಬ ಎಂಬ ಕನಸು ಕಾಣುತ್ತಿರುವ ಪಕ್ಷದ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. 8ನೇ ವಾರ್ಡ್‍ನ ಮಾಜಿ ಸದಸ್ಯೆ ಗೌರಮ್ಮ ಚಂದ್ರಪ್ಪ ಅವರಿಗೇ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ಲಕ್ಷ್ಮೀದೇವಿ ಬಿ. ವೀರಣ್ಣ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಲಕ್ಷ್ಮೀದೇವಿ ಸಹೋದರ ವಿನಾಯಕ ಪೈಲ್ವಾನ್‍ಗೆ 7ನೇ ವಾರ್ಡ್‍ನಿಂದ ಕಾಂಗ್ರೆಸ್ ಟಿಕೆಟ್ ದೊರೆತಿದ್ದು, ಇವರ ವಿರುದ್ಧ ಮಾಜಿ ಸದಸ್ಯ ಕಟಗಿ ಬಸಪ್ಪ ಬಂಡಾಯದ ಬಾವುಟ ಬಿಸಿದ್ದಾರೆ.

     30ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯದ ಬಿಸಿ ತಟ್ಟಿದೆ. ಅಲ್ಲದೇ, ಎಸ್.ಜೆ.ಎಂ. ನಗರದಲ್ಲಿ (ವಾರ್ಡ್ 45) ಅಧಿಕೃತ ಅಭ್ಯರ್ಥಿ ಸಾಗರ ಎಲ್.ಎಚ್. ವಿರುದ್ಧ ಪಕ್ಷೇತರರಾಗಿ ಆನಂದಪ್ಪ ಕಣಕ್ಕೆ ಇಳಿದಿದ್ದಾರೆ.ಒಂದು ಅಂದಾಜಿನ ಪ್ರಕಾರ ಕಾಂಗ್ರೆಸ್‍ಗ್ಗಿಂತ ಬಿಜೆಪಿಗೆ ಹೆಚ್ಚಿನ ಬಂಡಾಯದ ಬಿಸಿ ತಟ್ಟಿದ್ದು, ಇದು ಕಾಂಗ್ರೆಸ್ ಆಡಳಿತದಲ್ಲಿದ್ದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಮಲ ಅರಳಿಸಬೇಕೆಂಬ ಹುಮ್ಮಸ್ಸನಿನಲ್ಲಿರುವ ಪಕ್ಷದ ನಾಯಕರ ನಿದ್ದೆ ಗೆಡಸಿದೆ.

     ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಎದ್ದಿರುವ ಅತೃಪ್ತರ ಜೊತೆ ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸಿ, ಮನವೋಲಿಸಲು ಹರಸಾಹಸ ಪಡುತ್ತಿದ್ದು, ಆರಂಭದಲ್ಲಿ ಎದ್ದಿರುವ ಬಂಡಾಯದ ಗಾಳಿ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನಾಂಕವಾಗಿರುವ ನ.4ರ ನಂತರವೂ ಈ ಎರಡೂ ಪಕ್ಷಗಳಲ್ಲಿ ಬಿರುಗಾಳಿ ಎಬ್ಬಿಸಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link