ಕೊರಟಗೆರೆ
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆಯ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಸಂಸ್ಥೆ ಯಾಗಿದೆ ಎಂದು ತುಮಕೂರು ಶಾಖೆಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಎಸ್. ನಾಗಣ್ಣ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನೂತನ ಕೊರಟಗೆರೆ ಖಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಪಂಚದಲ್ಲಿ ಪ್ಲೇಗ್ ಎಂಬ ಮಹಾಮಾರಿ ರೋಗ ಬಂದಾಗ ಅದರ ನಿರ್ಮೂಲನೆಗಾಗಿ ಹಾಗೂ ಬಡವರ ಆರೋಗ್ಯ ರಕ್ಷಣೆಗಾಗಿ ಸ್ಥಾಪಿತವಾದ ಸೇವಾ ಮನೋಭಾವದ ಸಂಸ್ಥೆ ರೆಡ್ ಕ್ರಾಸ್ ಸಂಸ್ಥೆ.
ಈ ಸಂಸ್ಥೆಯ ಸಮಾಜ ಸೇವೆಗಾಗಿ ಶಾಂತಿ ನೋಬೆಲ್ ಪ್ರಶಸ್ತಿ ಲಭಿಸಿದೆ. ಪ್ರಪಂಚದ ಎಲ್ಲಾ ವಿಜ್ಞಾನಿಗಳು ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಅವಯವಗಳ ಜೋಡಣೆ ಕಂಡು ಹಿಡಿದಿದ್ದರೂ, ನೀರು ಮತ್ತು ರಕ್ತ ನಿರ್ಮಿಸಲು ಸಾಧ್ಯವಾಗಿಲ್ಲ. ಮನುಷ್ಯನಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಂದಾಗ ರೆಡ್ಕ್ರಾಸ್ ಸಂಸ್ಥೆ ದಾನಿಗಳಿಂದ ರಕ್ತ ಸಂಗ್ರಹಿಸಿ ಉಚಿತವಾಗಿ ವಿತರಿಸಿ ಮನುಷ್ಯನ ಪ್ರಾಣ ರಕ್ಷಣೆ ಮಾಡುತ್ತಿದೆ ಎಂದು ತಿಳಿಸಿದರು.
ನೂತನ ಖಾಖೆಯನ್ನು ಉದ್ಘಾಟಿಸಿ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಎಫ್.ಕೆ.ನದಾಫ್, ರೆಡ್ ಕ್ರಾಸ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ ಸಮಯದಲ್ಲಿ ಉಚಿತ ರಕ್ತ ಸಂಗ್ರಹಿಸಿ ನೀಡುವುದರೊಂದಿಗೆ ಆಟೋ ಚಾಲಕರಿಗೆ ಆರೋಗ್ಯ ಸೇವೆ ಸಲ್ಲಿಸುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಕೊರಟಗೆರೆ ತಾಲ್ಲೂಕಿನಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಸಂಸ್ಥೆಗೆ ತಾಲ್ಲೂಕಿನಲ್ಲಿ ನಡೆಸುವ ಎಲ್ಲಾ ಸಮಾಜ ಮುಖಿ ಕಾರ್ಯಕ್ರಮಕ್ಕೆ ತಮ್ಮ ಇಲಾಖೆಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಗೋವಿಂದರಾಜು, ರೆಡ್ಕ್ರಾಸ್ ಸಂಸ್ಥೆಯ ಸೇವಾ ಕಾರ್ಯ ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತೆ ಮಾಡಬೇಕು ಎಂದು ತಿಳಿಸಿ, ಸಂಸ್ಥೆ ಕಾರ್ಯನಿರ್ವಹಿಸಲು ಸ್ಥಳ ನೀಡುವುದರೊಂದಗೆ ಪಟ್ಟಣ ಪಂಚಾಯಿತಿಯಿಂದ ಸಮಾಜ ಮುಖಿ ಕಾರ್ಯಗಳಿಗೆ ದೊರೆಯುವ ಶೇ.3 ರಷ್ಟು ಹಣ ಮುಂದಿನ ದಿನಗಳಲ್ಲಿ ರೆಡ್ಕ್ರಾಸ್ ಸಂಸ್ಥೆಗೆ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ಜಿ.ನಾಗೇಂದ್ರಪ್ಪ, ಶಾಖೆಗಳ ಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಆರ್.ಉಮೇಶ್, ಸುಭಾಷಿಣಿ, ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್ಕುಮಾರ್, ತಾಲ್ಲೂಕು ಶಾಖಾ ಚೇರ್ಮನ್ ಮಂಜುಳಾ ಆರಾಧ್ಯ, ಕಾರ್ಯದರ್ಶಿ ದಾಕ್ಷಾಯಿಣಿ ರಾಜಣ್ಣ, ಖಜಾಂಚಿ ಚಂದ್ರಕಲಾ, ಗ್ರಾ.ಪಂ.ಸದಸ್ಯೆ ಲಕ್ಷ್ಮೀ, ಮಮತಾ ಕೆ.ಎಲ್.ಎಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.