ಖಾತ್ರಿ ಅನುದಾನ ಪೋರ್ಟಲ್‍ನಲ್ಲಿ ಲಾಕ್

ದಾವಣಗೆರೆ

     ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶೇ.60 ಕೂಲಿ ಮತ್ತು ಶೇ.40 ಮೆಟಿರೀಯಲ್ ಘಟಕಗಳನ್ವಯ ಕೆಲಸ ನಡೆಯದೇ, ಕೇವಲ ಮೆಟಿರಿಯಲ್ ಘಟಕದ ಕೆಲಸ ಹೆಚ್ಚಾಗಿರುವ ಪರಿಣಾಮ ಅನುಪಾತ ಸರಿದೂಗದೇ ಯೋಜನೆಯ ಅನುದಾನವನ್ನು ಕೇಂದ್ರ ಪೋರ್ಟಲ್‍ನಲ್ಲಿ ಲಾಕ್ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಶೇ.60 ಕೂಲಿ ಮತ್ತು ಶೇ.40 ಮೆಟಿರೀಯಲ್ ಘಟಕಗಳನ್ವಯ ಕೆಲಸ ನಡೆಯದೇ, ಈ ಅನುಪಾತ ಸರಿದೂಗದೇ ಮೆಟಿರೀಯಲ್ ಘಟಕದ ಕೆಲಸ ಹೆಚ್ಚುತ್ತಿರುವ ಪರಿಣಾಮ ಅನುದಾನವನ್ನು ಕೇಂದ್ರದ ಪೋರ್ಟಲ್‍ನಲ್ಲಿ ಲಾಕ್ ಮಾಡಲಾಗಿದೆ. ಹೀಗಾಗಿ ಅನುದಾನ ಬಿಡುಗಡೆಯಾಗದೇ ತೊಂದರೆಯಾಗುತ್ತಿದೆ. ಆದ್ದರಿಂದ ಈ ಅನುಪಾತವನ್ನು ಸರಿದೂಗಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚನೆ ನೀಡಿದರು.

      ಇದಕ್ಕೆ ಪ್ರತಿಕ್ರಯಿಸಿದ ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್, ನರೇಗಾ ಯೋಜನೆಯ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರದೇ ಕೇಂದ್ರ ಸರ್ಕಾರಕ್ಕೆ ಒಳಪಡುವುದರಿಂದ ಉತ್ತರ ಬೇಗ ಸಿಗುತ್ತಿಲ್ಲ ಎಂದರು.

ನರೇಗಾದಡಿ ಅಡಿಕೆ ಸೇರಿಸಿ:

   ಸದಸ್ಯ ವಿಶ್ವನಾಥ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ಬೆಳೆ ಪ್ರೋತ್ಸಾಹಕ್ಕೆ ಆರ್ಥಿಕ ಸೌಲಭ್ಯ ಪಡೆಯಲು ರೈತರು ಅರ್ಜಿ ಸಲ್ಲಿಸಿದ್ದು, ಅದನ್ನು ಜಿ.ಪಂ. ಸಿಇಒ ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿ, ಇದರಿಂದ ಹೊನ್ನಾಳಿ ಮತ್ತು ಚನ್ನಗಿರಿ ಭಾಗದ ರೈತರಿಗೆ ಅನಾನುಕೂಲ ಉಂಟಾಗಿದೆ ಎಂದು ದೂರಿದರು.

      ಜಿ.ಪಂ. ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಗೋರಖ್ ಸಿಂಗ್ ವರದಿಯಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳನ್ನು ಗುರುತಿಸಿದ್ದು, ಅದರಲ್ಲಿ ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳು ಸೇರಿವೆ. ಉದ್ಯೋಗ ಖಾತ್ರಿಯಲ್ಲಿ ಅಡಿಕೆಗೆ ಆರ್ಥಿಕ ಸಹಾಯ ನೀಡಿದ್ದಲ್ಲಿ ಮುಂದೆ ತೊಂದರೆಯಾಗಲಿದೆ ಎಂದು ಮನಗೊಂಡು ಅರ್ಜಿ ಸ್ವೀಕಾರಕ್ಕೆ ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ.

      ಅಡಿಕೆ ಬೆಳೆಗಾರರು ಖಾತ್ರಿ ಯೋಜನೆಯಲ್ಲಿ ಆರ್ಥಿಕ ಸಹಾಯ ದೊರಕಿಸುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಅವರಿಂದ ಇನ್ನೂ ನಮಗೆ ನಿರ್ದೇಶನ ಬಂದಿಲ್ಲ. ಬಂದ ತಕ್ಷಣ ಅಡಿಕೆಯನ್ನು ‘ಖಾತ್ರಿ’ಯೊಳಗೆ ಸೇರಿಸಲಾಗುವುದು ಎಂದರು.

ಏಜೇನ್ಸಿಗೆ ಷರತ್ತು:

      ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಹೊರ ಗುತ್ತಿಗೆ ಸೇವೆ ನೀಡುವ ಏಜೆನ್ಸಿ ಯಾವುದೇ ಆದರೂ ನಿಮಯಾನುಸಾರ ಹಾಗೂ ತಾಂತ್ರಿಕವಾಗಿ ಸಮರ್ಪಕವಾದ ಏಜೆನ್ಸಿಗೆ ಟೆಂಡರ್ ನೀಡಬೇಕು. ಹಾಗೂ ಸಿಬ್ಬಂದಿಗಳ ಕನಿಷ್ಟ 3 ತಿಂಗಳ ವೇತನದ ಮೊತ್ತವನ್ನು ಠೇವಣಿ ಇರಿಸಿಕೊಂಡು ಟೆಂಡರ್ ನೀಡುವಂತೆ ಜಿ.ಪಂ ನಡವಳಿಯಲ್ಲಿ ದಾಖಲಾಗಬೇಕು. ಸಿಬ್ಬಂದಿಗಳು ಅನೇಕ ತಿಂಗಳು ವೇತನವಿಲ್ಲದಂತೆ ಪರಿತಪಿಸುವುದನ್ನು ಕಂಡಿದ್ದೇವೆ. ಆದ್ದರಿಂದ ರಾಜ್ಯದಲ್ಲೇ ಮಾದರಿಯಾಗುವಂತೆ ಜಿಲ್ಲೆಯಲ್ಲಿ ಸಾಮಾನ್ಯ ಸಭೆಯ ನಡವಳಿಯಂತೆ ಏಜೆನ್ಸಿಯವರು 3 ತಿಂಗಳ ವೇತನವನ್ನು ಠೇವಣಿ ಇರಿಸುವ ಷರತ್ತಿಗೊಳಪಟ್ಟು ಟೆಂಡರ್ ನೀಡಬೇಕೆಂದರು. ಎಲ್ಲ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

       ಇದಕ್ಕೆ ಪ್ರತಿಕ್ರಯಿಸಿದ ಸಿಇಓ ಪದ್ಮಾ ಬಸವಂತಪ್ಪ, ಕೆಪಿಟಿಟಿ ಕಾಯ್ದೆ ಪ್ರಕಾರ ಟೆಂಡರ್ ಕರೆಯಲಾಗುವುದು. ಅದಕ್ಕೆ ನಾವು ತಿದ್ದುಪಡಿ ಅಥವಾ ಸೇರ್ಪಡೆ ಮಾಡಲು ಬರುವುದಿಲ್ಲ. ಆದರೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.ಉಪ ಕಾರ್ಯದರ್ಶಿ ಆನಂದ್ ಮಾತನಾಡಿ, ಟೆಂಡರ್ ಆದ ನಂತರ ಕಾರ್ಯಾದೇಶ ನೀಡುವ ಮುನ್ನ ನೆಗೋಷಿಯೇಷನ್ ವೇಳೆ ಈ ಷರತ್ತನ್ನು ವಿಧಿಸಿ ಏಜೆನ್ಸಿಗೆ ಕಾರ್ಯಾದೇಶ ನೀಡಬಹು ಎಂದು ಸಭೆಯ ಗಮನಕ್ಕೆ ತಂದರು.

ನಿಗಮದ ಸಾಲಕ್ಕೆ ಸಿಬಿಲ್ ಬೇಡ:

      ಜಿ.ಪಂ.ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡುವಲ್ಲಿ ಹಾಗೂ ಎಸ್‍ಸಿ, ಎಸ್‍ಟಿ, ಹಿಂದುಳಿದ ನಿಗಮಗಳ ಫಲಾನುಭವಿಗಳಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್, ಮತ್ತಿತರೆ ನಿಯಮಗಳನ್ನು ಅನ್ವಯಿಸಿ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತಾಗಿ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳಿಗೆ ತೊಂದರೆಯಾಗದಂತೆ ಬ್ಯಾಂಕುಗಳು ಕಾರ್ಯನಿರ್ವಹಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

      ಹದಡಿ ಕ್ಷೇತ್ರದ ಸದಸ್ಯರಾದ ಜಿ.ಸಿ.ನಿಂಗಪ್ಪ ತಮ್ಮ ಕ್ಷೇತ್ರ ಬ್ಯಾಂಕಿನಲ್ಲಿ ಫಲಾನುಭವಿಗಳಿಗೆ ಕೇವಲ ಸಬ್ಸಿಡಿ ಮಾತ್ರ ನೀಡಲಾಗಿದೆ. ಸಾಲ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರೊಂದಿಗೆ ಮಾತನಾಡಿಯೂ ಪ್ರಯೋಜನವಾಗಿಲ್ಲ ಎಂದರು.

       ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಅಧಿಕಾರಿ ಪ್ರತಿಕ್ರಿಯಿಸಿ, ಆರ್‍ಬಿಐ ಮಾರ್ಗಸೂಚಿಗಳನ್ವಯ ಸಾಲ ನೀಡುವಾಗ ಅರ್ಜಿದಾರರ ಸಿಬಿಲ್ ಸ್ಕೋರ್ ನೋಡಬೇಕು. ಆದರೆ ಕೆಲವು ವಿನಾಯಿತಿಗಳನ್ನೂ ನೀಡಲಾಗಿದ್ದು, ಹಿಂದುಳಿದವರ ಸಾಲಸೌಲಭ್ಯದಲ್ಲಿ ಸಿಬಿಲ್ ಸ್ಕೋರ್ ನೋಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರಬಹುದು. ಪ.ಜಾ/ಪ.ಪಂ ನಿಗಮಗಳಿಗೆ ಸಂಬಂಧಿಸಿದ ಸಾಲ ಸೌಲಭ್ಯದಲ್ಲಿ ತೊಂದರೆಯಾದವರ ಪಟ್ಟಿ ನೀಡಿದಲ್ಲಿ ಪರಿಶೀಲಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಗೇಶ್ ಸ್ವಾಮಿ, ಹೆಚ್.ಆರ್. ಮಹೇಶ್, ಜೆ. ಸವಿತಾ, ಸದಸ್ಯರಾದ ತೇಜಸ್ವಿ ಪಟೇಲ್, ಓಂಕಾರಪ್ಪ, ಶಾಂತ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap