ಬೆಂಗಳೂರು
ಮೈಸೂರಿನ ನಜರಾಬಾದ್‍ಗೆ ಬಸವನತಿಟ್ಟು ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ನಾಯಕ ಗೋ.ಮಧುಸೂಧನ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ನಗರಗಳಿಗೆ ಮರುನಾಮಕರಣ ಮಾಡುತ್ತಿದ್ದು ಇದನ್ನು ಮಾದರಿಯಾಗಿಟ್ಟುಕೊಂಡು ಮೈಸೂರಿನ ನಜರಾಬಾದ್‍ಗೆ ಬಸವನತಿಟ್ಟು ಎಂದು ಮರು ನಾಮಕರಣ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಮೈಸೂರು ಅರಮನೆಯ ಪಕ್ಕದಲ್ಲಿರುವ ನಜರಾಬಾದ್ ಈ ಹಿಂದೆ ಬಸವನತಿಟ್ಟು ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆದರೆ ಅದನ್ನು ಟಿಪ್ಪು ಆಳ್ವಿಕೆಯಲ್ಲಿ ಬದಲಾಯಿಸಲಾಗಿದೆ.
ಇತಿಹಾಸದ ಪುಟಗಳಲ್ಲಿ ಈ ದಾಖಲೆ ಲಭಿಸಲಿದ್ದು, ಕೂಡಲೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈಸೂರಿನ ನಜರಾಬಾದ್ ಮೊಹಲ್ಲಾಗೆ ಬಸವನತಿಟ್ಟು ಎಂದು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಆಗ್ರಹಿಸಿದ್ದಾರೆ.
ಈ ಹಿಂದೆ ಮಡಿಕೇರಿಯನ್ನ ಜಫರಾಬಾದ್, ದೇವನಹಳ್ಳಿಯನ್ನ ಯೂಸೂಫಾಬಾದ್, ಮೈಸೂರನ್ನು ನಜರಾಬಾದ್, ಸಂಕ್ರೀದುರ್ಗವನ್ನು ಮುಜಾಫರಾಬಾದ್, ಸಿರಾವನ್ನು ರುಸ್ತುಮಾಬಾದ್ ಎಂದು ಹಾಗೂ ಸಕಲೇಶಪುರವನ್ನು ಮಂಜರಾಬಾದ್ ಎಂದು ಮರು ನಾಮಕರಣ ಮಾಡಲಾಗಿತ್ತು.
ಆದರೆ ಬಳಿಕ ಎಲ್ಲಾ ಹೆಸರುಗಳನ್ನು ಮತ್ತೆ ಹಳೆಯ ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಮೈಸೂರು ಕೂಡ ನಜರಾಬಾದ್ ಹೆಸರಿನಿಂದ ಬದಲಾಗಿ ಮೂಲ ಹೆಸರಿನಲ್ಲೇ ಗುರುತಿಸಿಕೊಂಡಿದೆ. ಆದರೆ ಒಂದು ಮೊಹಲ್ಲ ನಜರಾಬಾದ್ ಎಂದಾಗಿದೆ. ಇತಿಹಾಸ ಹುಡುಕ ಹೊರಟಾಗ ಅದು ಬಸವನತಿಟ್ಟು ಎನ್ನುವ ಹೆಸರು ಪಡೆದಿತ್ತು ಎನ್ನುವುದು ಗೊತ್ತಾಗಿದೆ.
ಮೈಸೂರು ಅರಮನೆಯ ಪೂರ್ವಭಾಗದ ದೊಡ್ಡಕೆರೆಯ ಒಂದು ಭಾಗ ಇಟ್ಟಿಗೆಗೂಡು ಎಂದು ಮತ್ತೊಂದು ಭಾಗ ಬಸವನತಿಟ್ಟು ಎಂದು ಕರೆಸಿಕೊಳ್ಳುತ್ತಿತ್ತು. ಇಟ್ಟಿಗೆಗೂಡು ಹೆಸರು ಈಗಲೂ ಇದೆ. ಆದರೆ ಬಸವನತಿಟ್ಟು ಮಾತ್ರ ನಜರಾಬಾದ್ ಎಂದಾಗಿದೆ.
ಇದು ಮೈಸೂರಿಗರಿಗೆ ಮತ್ತು ಮೈಸೂರನ್ನು ಆಳಿದ ಯದುವಂಶದವರಿಗೆ ಅವಮಾನಕರ ಸಂಗತಿಯಾಗಿದೆ. ಹಾಗಾಗಿ ಕೂಡಲೇ ನಜರಾಬಾದ್ ಹೆಸರನ್ನು ಬಸವನತಿಟ್ಟು ಎಂದು ಮರು ನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ವಕ್ತಾರ ಗೋ.ಮಧುಸೂದನ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








