ಉಡುಪಿ:
ಹಿತಿಹಾಸ ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣಮಠದಲ್ಲಿನ ಮುಖ್ಯಪ್ರಾಣ (ಹನುಮಂತ) ದೇವರ ಗರ್ಭಗುಡಿಗೆ ಇದೇ ಮೊದಲ ಬಾರಿಗೆ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.
ಸೋದೆ ಮಠದ ವಾದಿರಾಜ ಸ್ವಾಮೀಜಿ ಅಯೋಧ್ಯೆಯಿಂದ ತಂದ ಮುಖ್ಯಪ್ರಾಣ ದೇವರ ಮೂರ್ತಿ ಯನ್ನು ಶ್ರೀ ಕೃಷ್ಣ ದೇವರ ಗರ್ಭಗುಡಿಯ ಹೊರ ಭಾಗದ ಬಲ ಪಾರ್ಶ್ವದಲ್ಲಿ ಹಾಗೂ ಗರುಡ ದೇವರ ವಿಗ್ರಹವನ್ನು ಎಡ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಿದ್ದರು.
10 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ
ಮುಖ್ಯಪ್ರಾಣ ದೇವರ ಗರ್ಭಗುಡಿಯ ಹೊರಾಂಗಣವನ್ನು ಇದೀಗ ಸುಮಾರು 10 ಲ.ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗು ತ್ತಿದೆ. ಹಿಂದೆ ಗರ್ಭಗುಡಿಯ ಹೊರಾಂಗಣದ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದು, ಅದರ ಮೇಲೆ ಮರದ ಹಲಗೆ ಹಾಗೂ ತಾಮ್ರದ ತಗಡಿನ ಹೊದಿಕೆಯನ್ನು ಹಾಕಲಾಗಿತ್ತು.
ಶಿಥಿಲಾವಸ್ತೆ ತಲುಪಿದ ಗೋಡೆ!
ಹನುಮಂತ ದೇವರ ಗರ್ಭ ಗುಡಿಯು ಹೆಚ್ಚು ಭಾಗ ಮಣ್ಣಿನಿಂದ ಕೂಡಿದ್ದು ಅದರ ರಕ್ಷಣೆಗೆಂದು ಆಳವಡಿಸಲಾಗಿದ್ದ ಮರದ ಹಲಗೆಯು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಪಲಿಮಾರು ಶ್ರೀಪಾದರು ಮುಖ್ಯಪ್ರಾಣ (ಹನುಮಂತ) ದೇವರ ಹೊರಾಂಗಣದ ಎಡಪಾರ್ಶ್ವ ಹಾಗೂ ಮುಂಭಾಗದ ಗೋಡೆ ಯನ್ನು ಸಂಪೂರ್ಣವಾಗಿ ನವೀಕರಿಸಲು ಮುಂದಾಗಿದ್ದಾರೆ. ಗೋಡೆ ನಿರ್ಮಾಣಕ್ಕೆ ಕಾರ್ಕಳದಿಂದ ತರಿಸಲಾದ ಕಲ್ಲುಗಳನ್ನು ಬಳಸಲಾಗುತ್ತಿದೆ ಎಂದಿದ್ದಾರೆ.
ಮಠಕ್ಕೆ ಬಂದು ಶ್ರೀ ಕೃಷ್ಣ ದೇವರ ದರ್ಶನ ಪಡೆದ ಭಕ್ತರು ಮುಖ್ಯಪ್ರಾಣ ಹಾಗೂ ಗುರುಡ ದೇವರ ದರ್ಶನ ಪಡೆಯದೆ ಹಿಂದಿರುಗುವುದಿಲ್ಲ. ಇದೀಗ ಗರ್ಭಗುಡಿ ಹೊರಾಂಗಣ ನವೀಕರಣದಿಂದ ಗರ್ಭಗುಡಿ ಇನ್ನಷ್ಟು ವಿಶಾಲವಾಗಿ ಕಾಣಿಸಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಶ್ರೀಗಳಿಂದ ಅಭಿವೃದ್ಧಿ
ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ದ್ವಿತೀಯ ಪರ್ಯಾಯ ಅವಧಿಯಲ್ಲಿ ಶ್ರೀ ಕೃಷ್ಣಮಠದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಶ್ರೀ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋ.ರೂ. ವೆಚ್ಚದಲ್ಲಿ ಸ್ವರ್ಣ ಹೊದಿಕೆ ನಿರ್ಮಾಣ, 8 ಶತಮಾನ ಗಳ ಹಿಂದಿನ ಮಧ್ವಾಚಾರ್ಯರು ಕುಳಿತು ಕೃಷ್ಣ ಆರಾಧನೆ ಮಾಡುತ್ತಿದ್ದ ಹಾಗೂ ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿದ್ದ ಸರ್ವಜ್ಞ ಪೀಠಕ್ಕೆ 25 ಲ.ರೂ. ವೆಚ್ಚದಲ್ಲಿ ದಾರುಶಿಲ್ಪದ ಮೆರುಗು ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
