ಮಧುಗಿರಿ
ಪಟ್ಟಣದ ಗುರುಭವನದ ಮುಂಭಾಗದ ಅಂಗಡಿ ಮಳಿಗೆಗಳ ಬಾಡಿಗೆಯ ಹಣಕಾಸಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಗುರುಭವನ ಕಟ್ಟಡದ ಹಿಂಭಾಗದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಎಸ್‍ಎಸ್‍ಎ ವಸತಿಗೃಹಗಳನ್ನು ನಿರ್ಮಿಸಿ, ಅಂದಿನ ಗುರುಭವನ ಅಧ್ಯಕ್ಷರಾಗಿದ್ದ ಎಂ.ವಿ.ರಾಜಣ್ಣ ಹಾಗೂ ಕಾರ್ಯದರ್ಶಿ ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಿ 45 ಸಾವಿರ ಹಣವನ್ನು ಗುರುಭವನ ಜಂಟಿ ಖಾತೆಗೆ ಜಮಾ ಮಾಡದೆ ಅವ್ಯವಹಾರ ನಡೆಸಿದ್ದಾರೆ. ಅಧ್ಯಕ್ಷರಲ್ಲದವರು ಅಕ್ರಮವಾಗಿ ಅಂಗಡಿ ಮಳಿಗೆಗಳ ಬಾಡಿಗೆ ಕರಾರಿಗೆ ಸಹಿ ಹಾಕಿದ್ದಾರೆ. ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಯಾರಿಸಿರುವ ಜಮಾ ಖರ್ಚುಗಳ ಪಟ್ಟಿಯ ಮಾಹಿತಿಯನ್ನು ನೀಡಿಲ್ಲ ಎಂದು ವಿವಿಧ ಸಂಘಟನೆಯ ಶಿಕ್ಷಕರು ಆರೋಪಿಸಿದರು.
ಗುರು ಭವನ ಮುಂಭಾಗ 31 ಅಂಗಡಿ ಮಳಿಗೆಗಳ ಹಾಗೂ ಕಟ್ಟಡದ ಬಾಡಿಗೆ ಹಣವನ್ನು ಗುರುಭವನದ ಜಂಟಿ ಖಾತೆಗೆ ಜಮಾ ಮಾಡದೆ, ಸಮಿತಿಯ ಕಾರ್ಯದರ್ಶಿ ನಗದು ರೂಪದಲ್ಲಿ ಸಂಗ್ರಹಿಸಿಸುತ್ತಿದ್ದಾರೆ. ಇಲ್ಲ ಸಲ್ಲದ ಸುಳ್ಳು ಲೆಕ್ಕ ಪತ್ರಗಳನ್ನು ತೋರಿಸುತ್ತಾರೆ. ಗುರುಭವನ ಸಮಿತಿಯಲ್ಲಾಗಿರುವ ಅವ್ಯವಹಾರದ ಹಾಗೂ ಅನ್ಯಾಯದ ಬಗ್ಗೆ ಸೂಕ್ತ ತನಿಖೆ ನಡೆಸಿ, ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಸಮಿತಿಯನ್ನು ಪುನರ್ ರಚನೆ ಮಾಡಬೇಕು. ಕಟ್ಟಡದಿಂದ ವಸೂಲಾಗುವ ಹಣಕಾಸಿನ ವ್ಯವಹಾರವನ್ನು ನಿರ್ವಹಿಸಲು ಪ್ರತ್ಯೇಕವಾಗಿ ಬಿಇಓ ಕಚೇರಿಯ ಗುಮಾಸ್ತರೊಬ್ಬರನ್ನು ನೇಮಿಸಿ, ಪಾರದರ್ಶಕವಾದ ವ್ಯವಹಾರ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಿಡಿಪಿಐ ರವಿಶಂಕರ್ ರೆಡ್ಡಿ ಮನವಿ ಸ್ವೀಕರಿಸಿ ಮಾತನಾಡಿ, ಗುರುಭವನ ಅಂಗಡಿ ಮಳಿಗೆಗಳಲ್ಲಿ ಅವ್ಯವಹಾರ ನಡೆದಿರುವ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಿ, 15 ದಿನದೊಳಗಾಗಿ ಸಮಸ್ಯೆಯನ್ನು ಬಗೆ ಹರಿಸಲು ಶಿಕ್ಷಕರ ಸಭೆಯನ್ನು ಕರೆಯಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಮಾಜಿ ಅಧ್ಯಕ್ಷ ವಿ.ಎಚ್.ವೆಂಕಟೇಶ್, ತಾಲ್ಲೂಕು ಉಪನ್ಯಾಸಕ ಸಂಘದ ಅಧ್ಯಕ್ಷ ರಂಗಪ್ಪ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಾಮು, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಮಣ್ಣ, ಎಸ್.ಸಿ ಎಸ್.ಟಿ ಶಿಕ್ಷಕರ ಸಂಘದ ಅಧ್ಯಕ್ಷ ಫಣೀಂದ್ರನಾಥ್, ಶಿಕ್ಷಕರಾದ ಹೆಚ್.ಡಿ.ನರಸೇಗೌಡ, ರಂಗಧಾಮಯ್ಯ, ಎಸ್.ಎನ್.ಹನುಮಂತರಾಯ, ಪ್ರಕಾಶ್, ಶ್ರೀನಿವಾಸ, ನರಸಿಂಹಮೂರ್ತಿ, ಗಂಗಾಧರ, ಸಿದ್ದಗಂಗಮ್ಮ, ಮಂಜುಳ, ರಮೇಶ್, ಶಿವಕುಮಾರ್, ಬಸವರಾಜು, ಪುಟ್ಟೇಗೌಡ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ