ಕುಂದುವಾಡ ಕೆರೆಯ ಅಭಿವೃದ್ಧಿಗೆ ಪ್ರಸ್ತಾವನೆ

ದಾವಣಗೆರೆ

      ಕುಂದುವಾಡ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.

        ನಗರದ ಕುಂದುವಾಡ ಕೆರೆಯ ಸಮೀಪದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ವಿಭಾಗ ಸೇರಿದಂತೆ ಇತರೆ ಇಲಾಖೆಗಳ ವತಿಯಿಂದ ಜಲಾಮೃತ ಕಾರ್ಯಕ್ರಮ ಮತ್ತು ಜಲಶಕ್ತಿ ಅಭಿಯಾನದಡಿ ಸಸಿ ನೆಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಂದುವಾಡ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಜತೆಗೆ, ಪ್ರವಾಸೋದ್ಯಮ ಇಲಾಖೆಯಿಂದಲೂ ಸಹ ಅಗತ್ಯ ಅನುದಾನ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚ ಮಾಡಲಾಗುವುದು ಎಂದರು.

      ಜಲಾಮೃತ ಮತ್ತು ಜಲಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯನ್ನು ಹಸಿರೀಕರಣ ಮತ್ತು ಮಾಲಿನ್ಯ ರಹಿತ ನಗರವಾಗಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದಗದು, ಈ ಮೂಲಕ ಪ್ರಥಮ ಹಂತದಲ್ಲಿ ನಗರದ ಪ್ರವಾಸಿ ತಾಣವಾಗಿರುವ ಕುಂದುವಾಡ ಕೆರಯ ಸುತ್ತ ಮುತ್ತ ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ವಿವರಿಸಿದರು.

        ಕೇವಲ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಇಲಾಖೆಯಿಂದ ಮಾತ್ರ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಇಲಾಖೆಗಳ ಸಹಕಾರ ಅವಶ್ಯವಾಗಿದೆ. ಅಲ್ಲದೆ, ಸಾರ್ವಜನಿಕರು ಸಹ ‘ನಮ್ಮ ಜಲ ನಮ್ಮ ನೆಲ’ ಎಂಬ ಭಾವನೆಯನ್ನು ಬೆಳೆಸಿಕೊಂಡು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಇತರೆ ಸಂಘ, ಸಂಸ್ಥೆಗಳು ಕಾರ್ಯೊನ್ಮುಖರಾಗಿ ಜಿಲ್ಲೆಯನ್ನು ಹಸಿರುಮಯವಾಗಿಸಬೇಕೆಂದು ಕರೆ ನೀಡಿದರು.

         ಇಂತಹ ಕಾರ್ಯಕ್ರಮಗಳು ನಗರದಲ್ಲಿ ನಿರಂತರವಾಗಿ ನಡೆಯಬೇಕು ಎಂಬುದು ಜಿಲ್ಲಾಡಳಿತದ ಅಭಿಲಾಷೆಯಾಗಿದ್ದು, ನಗರದ ವ್ಯಾಪಾರಿಗಳು, ವ್ಯಾಣಿಜ್ಯೋದ್ಯಮಿಗಳಿಗೂ ಹಸಿರೀಕರಣಗೊಳಿಸಲು ಆಹ್ವಾನ ನೀಡಲಾಗಿದೆ. ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ಕೆರೆಯ ಸ್ವಚ್ಛತೆ, ಕಾರಂಜಿ ಅಭಿವೃದ್ಧಿ ಮತ್ತು ನಿರ್ವಹಣೆಗೆ ಮುಂದೆ ಬಂದಿವೆ. ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ಕುಂದುವಾಡ ಕೆರೆಯ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಯೋಗ ಶಿಬಿರ, ಪುಷ್ಪೋತ್ಪನ್ನ(ಫ್ಲವರಿಂಗ್) ಹಾಗೂ ಇಲ್ಲಿ ವಾಯುವಿಹಾರಕ್ಕೆ ಬರುವ ಜನರಿಗೆ ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

       ಜಿಲ್ಲಾ ಪಂಚಾಯತ್‍ನ ಸಿಇಒ ಹೆಚ್.ಬಸವರಾಜೇಂದ್ರ ಮಾತನಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ಜಲಾಮೃತ ಕಾರ್ಯಕ್ರಮದಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಈಗಾಗಲೇ ಒಂದು ಲಕ್ಷ ಸಸಿಗಳನ್ನು ನೆಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದನೇ ಶನಿವಾರ ಅಥವಾ ಮೂರನೇ ಶನಿವಾರ ಸ್ವಚ್ಛತೆ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ. ಜಲಾಮೃತ ಯೋಜನೆಯನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿಸಲು ಶ್ರಮವಹಿಸಲಾಗುವುದು ಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ದೂಡಾ ಆಯುಕ್ತ ಆದಪ್ಪ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶರೀಫ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಪಾರೆ ಶ್ರೀನಿವಾಸ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಉಮೇಶ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ.ಬಣಕಾರ್, ವಿಶೇಷ ಭೂ ಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap