ಕಾರ್ಮಿಕರಿಗಾಗಿ ವಿಶೇಷ ಪ್ಯಾಕೇಜ್‍ ನೀಡಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು :
 
     ರಾಜ್ಯದ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ಗೊತ್ತಿದೆ. ಆದರೂ ಕೈ ಕಟ್ಟಿ ಕೂರುವಂತಿಲ್ಲ. ಲಾಕ್‍ಡೌನ್ ಮುಗಿಯುವವರೆಗೆ ರೈತರು, ಕಾರ್ಮಿಕರು, ಬಡವರು ಸೇರಿದಂತೆ ಅಸಹಾಯಕರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. 
     ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಅವರು, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತನಾಡಿದರು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಿ ಬಳಿಕ ಆದೇಶ ವಾಪಸ್ ಪಡೆದಿದ್ದು ಸರಿಯಾಗಿದೆ. ಲಾಕ್‍ಡೌನ್ ನಿಯಮಗಳು ನೂರಕ್ಕೆ ನೂರರಷ್ಟು ಪಾಲನೆ ಆಗಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಬೇಡ ಎಂದರು. 
     ಸಭೆಯಲ್ಲಿ ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಎರಡು ದಿನಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಕೊರೊನಾ ಸೋಂಕು ನಿಯಂತ್ರಿಸುವ ವಿಷಯದಲ್ಲಿ ಸರ್ಕಾರ ಮಾಡಬೇಕಿರುವ ಕೆಲಸಗಳು ಸಾಕಷ್ಟಿದೆ. ಈ ವಿಚಾರದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಿದೆ. 
     ರಾಜ್ಯದಲ್ಲಿ ಅಸಂಘಟಿತ ವಲಯದ 1.32 ಕೋಟಿ ಕಾರ್ಮಿಕರಿದ್ದಾರೆ.  ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8 ಸಾವಿರ ಕೋಟಿ ರೂ.ಗಳಿದೆ. ತಲಾ ಎರಡು ಸಾವಿರ ರೂ. ನೀಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ.  ಇದುವರೆಗೆ 30 ಕೋಟಿ ರೂ. ಮಾತ್ರ ಹಂಚಿಕೆಯಾಗಿದೆ. ಎಲ್ಲ ಕಾರ್ಮಿಕರಿಗೂ ಈ ಸಹಾಯಧನದ ಸೌಲಭ್ಯ ಸಿಗಬೇಕು. 
ಪ್ಯಾಕೇಜ್ ಘೋಷಣೆ ಮಾಡಿ 
     ಈ ವರೆಗೆ ಒಂದು ಲಕ್ಷ ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೆಟ್ ಸಿಕ್ಕಿದೆ. ಬೆಂಗಳೂರು ಮಹಾನಗರ ಒಂದರಲ್ಲೇ ಮೂರು ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ರಾಜ್ಯಾದ್ಯಂತ  ಎಲ್ಲ ಕಾರ್ಮಿಕರಿಗೂ ಆಹಾರ ಸಿಗುವಂತೆ ಅಗಬೇಕು. ಮಡಿವಾಳರು, ಸವಿತಾ ಸಮಾಜದವರು, ಕುಂಬಾರರು, ಚಮ್ಮಾರರು, ಮನೆ ಕೆಲಸದವರು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿರುವ ಸಣ್ಣಪಟ್ಟಣ ಕೆಲಸ ಮಾಡುವ ಕಾರ್ಮಿಕರಿಗೂ ಸರ್ಕಾರದ ನೆರವು ಸಿಗಬೇಕು. ಅವರಿಗೆ ಉದ್ಯೋಗವೂ ಇಲ್ಲ. ಕೈಗೆ ಹಣವೂ ಬರುತ್ತಿಲ್ಲ ಎಂದು ವಿವರಿಸಿದರು. ಈ ವರ್ಗದ ಜನರಿಗಾಗಿಯೇ ಒಂದು ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. 
     ಕೊರೊನಾ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಬೇರೆ ರಾಜ್ಯಗಳ ಮಾದರಿಯನ್ನು ನಾವು ಅನುಸರಿಸುವುದು ಸೂಕ್ತ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಪರೀಕ್ಷೆ ಪ್ರಮಾಣ ಕಡಿಮೆ ಇದೆ. ಆ ಕುರಿತು ಸಿಎಂ ಗಮನ ಹರಿಸಬೇಕು. 
    ಕೊರೊನಾ ವಿಚಾರದಲ್ಲಿ ಒಂದು ಸಮುದಾಯದವರನ್ನು ಮಾತ್ರ ಗುರಿಯಾಗಿಟ್ಟುಕೊಂಡು ಕೆಲ ಶಾಸಕರು, ಸಂಸದರು ಟೀಕೆ ಮಾಡುತ್ತಿದ್ದಾರೆ. ನೀವೇ (ಸಿಎಂ) ಮನವಿ ಮಾಡಿಕೊಂಡರೂ ಹೇಳಿಕೆ ಕೊಡುವುದನ್ನು ಕೆಲವರು ನಿಲ್ಲಿಸುತ್ತಿಲ್ಲ. ಅಂಥವರ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡಿ. ಈ ವಿಷಯದಲ್ಲಿ ಪೊಲೀಸರ ಮೌನವೂ ಸರಿಯಲ್ಲ.
    ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತಿತರ ಕಡೆ  ಭತ್ತ ಇಳುವರಿಗೆ ಬರುತ್ತಿದೆ. ಆದರೆ ಖರೀದಿ ಮಾಡುವವರು ಇಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭತ್ತ ಖರೀದಿಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಹಕಾರ ಸಂಘ ಸಂಸ್ಥೆಗಳಿಗೆ ಆ ಜವಾಬ್ದಾರಿ ವಹಿಸುವ ಬಗ್ಗೆ ಆಲೋಚಿಸಬೇಕು. 
     ಹಣ್ಣು, ತರಕಾರಿ, ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಂಭೀರವಾದ ಕ್ರಮಗಳಾಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. 
       ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮುಖ್ಯಮಂತ್ರಿಯವರ ಗಮನ ಸೆಳೆದ ಅವರು, ಮಗ್ಗಗಳನ್ನು ಹೊಂದಿರುವ ನೇಕಾರರು ಬಟ್ಟೆ ಖರೀದಿಗೆ ಮಾಡುವವರು ಇಲ್ಲದೆ ಪರದಾಡುತ್ತಿದ್ದಾರೆ. ಅವರ ಬಗ್ಗೆಯೂ ಗಮನ ಹರಿಸಿ ಎಂದರು. 
ಪಡಿತರ ಕಾರ್ಡ್ ಇಲ್ಲದವರು, ಅದಕ್ಕಾಗಿ ಅರ್ಜಿ ಸಲ್ಲಿಸಿದವರು ಹಾಗೂ ಅರ್ಜಿ ಸಲ್ಲಿಸದೇ ಇರುವವರಿಗೂ ದವವ, ಧಾನ್ಯ ಕೊಡಿ ಎಂದು ಒತ್ತಾಯಿಸಿದರು. 
ಸಂಘ, ಸಂಸ್ಥೆಗಳಿಗೆ ಧನ್ಯವಾದ
       ಕಾರ್ಮಿಕರು, ಬಡವರಿಗೆ ಆಹಾರ ಒದಗಿಸುವಲ್ಲಿ ಖಾಸಗಿ ಸಂಘ, ಸಂಸ್ಥೆಗಳ ಪಾತ್ರ ಹಿರಿದು. ಆ ಸಂಸ್ಥೆಗಳು ಇಲ್ಲದೇ ಹೋಗಿದ್ದರೆ ಆಹಾರ ಒದಗಿಸುವುದು ಸರ್ಕಾರಕ್ಕೆ ಇನಷ್ಟು ಸವಾಲು ಅಗುತ್ತಿಲ್ಲ. ಇದಕ್ಕಾಗಿ ಸಂಘ, ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. 
       ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಹಿರಿಯ ನಾಯಕರಾದ ರಮೇಶ್ ಕುಮಾರ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ, ಡಾ. ಜಿ. ಪರಮೇಶ್ವರ, ವಿ.ಎಸ್. ಉಗ್ರಪ್ಪ, ಸಂಸದ ಡಿ.ಕೆ. ಸುರೇಶ್, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಅಜಯಸಿಂಗ್ ಅವರು ನಿಯೋಗದಲ್ಲಿದ್ದರು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap