ತುಮಕೂರು
ನಗರದಲ್ಲಿ ಜನ ವಸತಿ ಪ್ರದೇಶಗಳು ಹಾಗೂ ಕೈಗಾರಿಕಾ ಪ್ರದೇಶಗಳು ಹೆಚ್ಚಳವಾಗಿರುವುದರಿಂದ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಿದ್ದು, ಎಲ್ಲರಿಗೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ನಗರಕ್ಕೆ 2 ಟಿಎಂಸಿ ಹೆಚ್ಚುವರಿ ಹೇಮಾವತಿ ನೀರನ್ನು ಹಂಚಿಕೆ ಮಾಡಬೇಕೆಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ನಗರಕ್ಕೆ ಯಾವುದೇ ಹಂಚಿಕೆ ಇರಲಿಲ್ಲ ಆದರೆ ಈಗ ಮುಖ್ಯಮಂತ್ರಿಗಳಿಗೆ ಎತ್ತಿನಹೊಳೆ ಯೋಜನೆಯಡಿ ತುಮಕೂರು ತಾಲ್ಲೂಕಿನ ಉತ್ತರ ಹೋಬಳಿಗಳಾದ ಬೆಳ್ಳಾವಿ, ಕೋರಾಗೆ ಸೇರಿದ ಹೆಬ್ಬಾಕ ಕೆರೆಗೆ 0.5 ಟಿಎಂಸಿ ನೀರನ್ನು ಗ್ರಾವಿಟಿ ಮೂಲಕ ಹರಿಸಿ, ಉತ್ತರ ಹೋಬಳಿಗಳ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
2012ರಲ್ಲಿ 196 ಕೋಟಿ ಅನುದಾನದಲ್ಲಿ ತುಮಕೂರು ಜಿಲ್ಲೆಗೆ 24*7 ನೀರು ಪೂರೈಕೆ ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ನೀರು ಪೂರೈಕೆ ಮಾಡಲು ನೀರು ಹಂಚಿಕೆ ಮಾಡುವುದು ಅವಶ್ಯಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ನಗರದಲ್ಲಿ 37 ಓವರ್‍ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಎರಡ್ಮೂರು ತಿಂಗಳೊಳಗೆ 4-5 ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ಬುಗುಡನಹಳ್ಳಿ ನೀರು ಶುದ್ಧೀಕರಣ ಘಟಕ ನವೀಕರಣಗೊಂಡಿದ್ದು, ಗಂಗಸಂದ್ರ ಕೆರೆಯಿಂದ ಮರಳೂರು ಕೆರೆಗೆ ಹೇಮಾವತಿ ನೀರು ಹರಿಸುವ ಮೂಲಕ ಅಲ್ಲಿ ನೀರು ಶುದ್ಧೀಕರಣ ಘಟಕವನ್ನು ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಪ್ರಾರಂಭಿಸಲಾಗುವುದು. ಕೆಐಡಿಬಿಗೆ ಹಂಚಿಕೆ ಯಾಗಿರುವ ನೀರನ್ನು ದೇವರಾಯಪಟ್ಟಣ, ಮೈದಾಳ ಕೆರೆಗೆ ನೀರು ಹರಿಸಿ ಅಲ್ಲಿಂದ ವಿದ್ಯಾನಗರ ನೀರು ಶುದ್ಧಿಕರಣ ಘಟಕದ ಮೂಲಕ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ, ಪಿಎನ್‍ಆರ್ ಪಾಳ್ಯದಲ್ಲಿ ಶುದ್ಧಿಕರಣ ಘಟಕ ಕಾರ್ಯಾರಂಭಗೊಂಡರೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ ಎಂದರು.
ನಗರದಲ್ಲಿರುವ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ನೆಲಸಮಗೊಳಿಸಿ 50 ಕೋಟಿ ವೆಚ್ಚದಲ್ಲಿ ಅತ್ಯಾ ಧುನಿಕ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು, ಸ್ಮಾರ್ಟ್‍ಸಿಟಿ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಗೊಂಡಿದ್ದು, ಕ್ರೀಡಾಂಗಣದಲ್ಲಿ ಫುಟ್ಬಾಲ್ ಟರ್ಫ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವುದರಿಂದ, ಸ್ಥಳೀಯರಿಗಾಗಿ ಟ್ರ್ಯಾಕ್ ಹಾಗೂ ಕ್ರೀಡಾಂಗಣದ ಹೊರಾಂಗಣದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗುವುದು ಎಂದರು.
ಈ ಸ್ಮಾರ್ಟ್ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಉಳಿದುಕೊಳ್ಳಲು ಆಗುವಂತಹ ಡ್ರಾಮಿಟರಿ ಹಾಗೂ 6000 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆಯೊಂದಿಗೆ ವಾಣಿಜ್ಯ ಚಟುವಟಿಕೆ ಅವಕಾಶ ಕಲ್ಪಿಸಲಾಗುವುದು, ವಾಹನ ನಿಲ್ದಾಣಕ್ಕೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಬ್ಬಾಕ ರವಿ, ಬಾವಿಕಟ್ಟೆ ನಾಗಣ್ಣ, ಸಿ.ಎನ್.ರಮೇಶ್, ಮುನಿಯಪ್ಪ, ವೇದಮೂರ್ತಿ, ವರದಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ