ಹಿರಿಯೂರು :
ಅಪಘಾತ ಮತ್ತು ಅಪರಾಧಗಳನ್ನು ತಡೆಗಟ್ಟುವ ಸಂಬಂಧ ಪಟ್ಟಣದಲ್ಲಿ ಪ್ರಮುಖ ಸ್ಥಳ ಮತ್ತು ಮುಖ್ಯರಸ್ತೆ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರ, ರಸ್ತೆ ಉಬ್ಬುಗಳನ್ನು ಅಳವಡಿಸಬೇಕು ಎಂಬುದಾಗಿ ರಾಜ್ಯ ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪರವರು ಡಿವೈಎಸ್‍ಪಿ ಎನ್ ರಮೇಶ್‍ರವರಿಗೆ ಮನವಿ ಸಲ್ಲಿಸಿದರು.
ಹಿರಿಯೂರು ಪಟ್ಟಣದಲ್ಲಿ ಪ್ರಮುಖ ಸ್ಥಳ ಮತ್ತು ವಿವಿಧ ಬಡಾವಣೆಗಳಲ್ಲಿ ನಿತ್ಯ ಅಪಘಾತಗಳು ಮತ್ತು ಅಪರಾಧ ಪ್ರಕರಣಗಳು ಸಂಭವಿಸುತ್ತಿದ್ದು, ವಾಹನ ಸವಾರರು, ಪಾದಚಾರಿಗಳು, ವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಪಘಾತ ಸಂಭವಿಸಿ ಕೈ-ಕಾಲು ಮುರಿತ, ಪ್ರಾಣಹಾನಿ ಮತ್ತು ರಕ್ತಗಾಯ, ಪ್ರಕರಣಗಳು ಸಂಭವಿಸುತ್ತಿದ್ದು, ಅಪಘಾತವಾದ ತಕ್ಷಣ ವಾಹನ ಸವಾರರು ವಾಹನ ನಿಲ್ಲಿಸದೇ ತಪ್ಪಿಸಿಕೊಂಡು ಪರಾರಿಯಾಗುತ್ತಿರುತ್ತಾರೆ, ಇದರಿಂದಾಗಿ ಹಿರಿಯೂರು ಪಟ್ಟಣವಾಸಿಗಳು ಆತಂಕಗೊಂಡಿರುತ್ತಾರೆ.
ಆದ್ದರಿಂದ ಅಪಘಾತ ಪ್ರಕರಣ ಪತ್ತೆ ಹಚ್ಚಲು, ಅಪಘಾತ ತಡೆಗಟ್ಟುವ ಉದ್ದೇಶದಿಂದ ಹಿರಿಯೂರು ಪಟ್ಟಣದ ಪ್ರಮುಖ ರಸ್ತೆ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲು ಹಾಗೂ ರಸ್ತೆಯ ಉಬ್ಬುಗಳನ್ನು ನಿರ್ಮಿಸಲು ಕೋರಿರುತ್ತೇವೆ ಮತ್ತು ಪಟ್ಟಣದ ಬಡಾವಣೆಗಳಲ್ಲಿ ಕಳ್ಳತನ, ದರೋಡೆ,ಇತ್ಯಾದಿ ಅಪರಾಧ ಪ್ರಕರಣ ತಡೆಗಟ್ಟುವ ದ್ಠೃಷ್ಟಿಯಿಂದ ಬೀಟ್ ಪೋಲಿಸರನ್ನು ನಿಯೋಜಿಸಲು ಹಾಗೂ ಪ್ರಮುಖ ವ್ಯಕ್ತಿಗಳು, ಜನಪ್ರತಿನಿಧಿಗಳು,ಉದ್ಯಮಿಗಳು,ಆರ್ಥಿಕ ಸ್ಥಿತಿವಂತರಿಗೆ ತಮ್ಮ ತಮ್ಮ ಮನೆಗಳ ಮುಂಭಾಗ, ಸಿ.ಸಿ.ಕ್ಯಾಮೆರಾ ಅಳವಡಿಸಲು ಸೂಕ್ತ ಮಾರ್ಗದರ್ಶನ ನೀಡುವಂತೆ ಪೋಲೀಸ್ ಅಧೀಕ್ಷಕರಲ್ಲಿ ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಆಲೂರು ಸಿದ್ಧರಾಮಣ್ಣ, ಗೌ|| ಅಧ್ಯಕ್ಷರಾದ ಕೃಷ್ಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಹೆಚ್.ದಸ್ತಗಿರಿಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
