ಪಾರ್ಕ್ ನಿರ್ವಹಣೆಗೆ ನೇಮಕ ಮಾಡಲು ಒತ್ತಾಯ

ತುಮಕೂರು

      ನಗರದಲ್ಲಿರುವ ಇರುವ ಉದ್ಯಾನವನಗಳಲ್ಲಿ ಕೇವಲ ಐದರಿಂದ ಆರು ಮಾತ್ರ ಉತ್ತಮ ರೀತಿಯಲ್ಲಿದ್ದು, ಅವುಗಳಲ್ಲಿ ಒಂದಾದ ಎನ್‍ಇಪಿಎಸ್ ಹಿಂಭಾಗದ ಉದ್ಯಾನವನದ ನಿರ್ವಹಣೆಗೆ ನೇಮಕ ಮಾಡಲು ಸ್ಥಳೀಯರು ಹಾಗೂ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಒತ್ತಾಯಿಸಿದ್ದಾರೆ.

       ಮಹಾನಗರ ಪಾಲಿಕೆಯ 15ನೇ ವಾರ್ಡ್‍ನಲ್ಲಿರುವ ಎನ್‍ಇಪಿಎಸ್ ಹಿಂಭಾಗದ ಪಾರ್ಕ್‍ನಲ್ಲಿ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಹಿರಿಯರು, ಮಕ್ಕಳು ಮಹಿಳೆಯರು ವಾಕಿಂಗ್ ಮಾಡಲು ಬರುತ್ತಾರೆ. ಆದರೆ ಇತ್ತೀಚೆಗೆ ರಾತ್ರಿ ವೇಳೆ ಮಧ್ಯಪಾನಾಸಕ್ತರ ಹಾವಳಿ ಹೆಚ್ಚಾಗಿದ್ದು, ಖಾಲಿ ಬಾಟಲಿಗಳನ್ನು ಅಲ್ಲಿಯೇ ಬೀಸಾಡುತ್ತಿದ್ದಾರೆ ಇದರಿಂದ ಓಡಾಡುವವರಿಗೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

        ಈ ಪಾರ್ಕ್‍ನಲ್ಲಿ ಉತ್ತಮವಾಗಿ ಗಿಡ ಮರಗಳು ಇದ್ದು, ಪ್ರತಿದಿನ ವಾಕಿಂಗ್ ಮಾಡಲು ಬರುತ್ತೇವೆ. ಈ ಮುಂಚೆ ಒಳ್ಳೆಯ ವಾತಾವರಣ ಇತ್ತು. ಇದೀಗ ಕುಡುಕರ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಬಾಟಲಿಗಳನ್ನು ಬಿಸಾಡುತ್ತಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಪಾರ್ಟಿ ಎಂದು ಪಾರ್ಕ್‍ನಲ್ಲಿ ಕೇಕ್ ಕತ್ತರಿಸಿ ಅದನ್ನುಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ ಇದರಿಂದ ವಾಕಿಂಗ್ ಮಾಡುವವರಿಗೆ ತೊಂದರೆ ಯಾಗುತ್ತಿದೆ. ಪಾರ್ಕ್‍ನ ನಿರ್ವಹಣೆ ಇಲ್ಲ. ಪಾರ್ಕ್‍ಗೆ ಗೇಟ್ ಇಲ್ಲ. ಸೆಕ್ಯುರಿಟಿಗಳಾರು ಇಲ್ಲವಾಗಿದ್ದು ತುಂಬಾ ಸಮಸ್ಯೆಗಳು ಆಗುತ್ತಿವೆ ಎಂದು ಸ್ಥಳೀಯ ನಿವಾಸಿ ರಂಜಿತ ಎಂಬುವವರು ಆರೋಪ ಮಾಡಿದರು.

       ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ಮಾತನಾಡಿ, ಪಾರ್ಕ್‍ನಲ್ಲಿ ಉತ್ತಮ ವಾತಾವರಣ ಇತ್ತು. ಇದೀಗ ಗೇಟ್ ಇಲ್ಲದೇ ಇದ್ದುದರಿಂದ ಜೊತೆಗೆ ವಿದ್ಯುತ್ ಸೌಲಭ್ಯಗಳು ಇಲ್ಲವಾಗಿರುವುದರಿಂದ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಪಾರ್ಕ್ ನಿರ್ವಹಣೆಗೆ ಯಾರೂ ಇಲ್ಲದೇ ಇರುವುದು ಪ್ರಮುಖ ಕಾರಣವಾಗಿದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಇದುವರೆಗೂ ಯಾರನ್ನು ನಿಯೋಜನೆ ಮಾಡಿಲ್ಲ. ಆದಷ್ಟು ಶೀಘ್ರದಲ್ಲಿ ಈ ಪಾರ್ಕ್ ನಿರ್ವಹಣೆಗೆ ಓರ್ವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ವಾರ್ಡ್‍ನ ನಿವಾಸಿಗಳು, ನಿತ್ಯ ವಾಕಿಂಗ್ ಮಾಡುವ ಹಿರಿಯರು ಉಪಸ್ಥಿತರಿದ್ದರು.

         ಪಾರ್ಕ್‍ನಲ್ಲಿ ಇರುವ ವಿದ್ಯುತ್ ದೀಪಗಳನ್ನು ಹೊಡೆದು ಹಾಕಲಾಗಿದೆ. ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಬೆಸ್ಕಾಂ ಇಲಾಖೆಯವರು ವಿದ್ಯುತ್ ವೈರ್‍ಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೊಂಬೆ ರೆಂಬೆಗಳನ್ನು ಕಡಿದು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಅದನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಲೇ ಇಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಗಿರಿಜಾ ಧನಿಯಾಕುಮಾರ್, ಪಾಲಿಕೆ ಸದಸ್ಯರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap