ತುಮಕೂರು

ಅಚ್ಛೆ ದಿನ್ ಆಯೇಗಾ ಎಂದು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರದಿಂದ ಅಚ್ಛೆ ದಿನ್ ಬದಲು ಆರ್ಥಿಕ ಸಂಕಷ್ಟ ಎದುರಾಗಿದೆ. ಇಂದು ದೇಶದಲ್ಲಿ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ಇದರು ನಡುವೆಯೂ ಕೇಂದ್ರ ಸರ್ಕಾರವು ರೈತ, ಕಾರ್ಮಿಕ ಹಾಗೂ ಜನ ಸಮಾನ್ಯರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದ್ದು, ಇದನ್ನು ವಿರೋಧಿಸಿ ಜ.8ರಂದು ಸಾರ್ವತ್ರಿಕ ಮುಷ್ಕರ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಬೆಂಬಲಿಸಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ದೇಶದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿದೆ. ಅನೇಕ ರೈತರು ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಲಕ್ಷಗಟ್ಟಲೆ ಕಾರ್ಮಿಕರು ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರ ಸರ್ಕಾರವು ಜನರ ಶ್ರೇಯೋಭಿವೃದ್ಧಿ ಬಗ್ಗೆ ಕಾಳಜಿ ವಹಿಸುವುದು ಬಿಟ್ಟು ಜನರ ಜೀವನವನ್ನು ಬೀದಿಗಿಳಿಸುವ ಕೆಲಸ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕ ಆರ್ಥಿಕ ನೀತಿಗಳನ್ನು ಜಾರಿಗೆ ಒತ್ತಾಯಿಸಿ ಕೇಂದ್ರದಿಂದ ವಿವಿಧ 10ಕ್ಕೂ ಸಂಘಟನೆಗಳು ಒಡಗೂಡಿದಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯೂ ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಕಳೆದ 6 ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವ ಮುನ್ನ ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಮೂರು ದಿನಗಳ ಬಳಿಕ ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದ್ದರು. ಆದರೆ ಅದು ಇಂದಿಗೂ ದಿನೆ ದಿನೆ ಏರುತ್ತಿದೆಯಾದರೂ ಕಡಿಮೆಯಾಗುತ್ತಿಲ್ಲ. ರೈಲ್ವೆ ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ. ಕಲ್ಪತರು ನಾಡಿನಲ್ಲಿ ತೆಂಗು ಅಡಕೆ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ಕೇಂದ್ರದ ಯೋಜನೆಗಳಿಂದ ರೈತರಿಗೆ ಯಾವ ರೀತಿಯಲ್ಲಿ ಅನುಕೂಲವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ರೈತರ ಅತ್ಮಹತ್ಯೆಗಳು ಏನಾದರೂ ಕಡಿಮೆಯಾಗಿದೆಯೇ..? ಎಂದು ಪ್ರಶ್ನಿಸಿದರು.
ಕಾರ್ಮಿಕರಿಗೆ ನೀಡುತ್ತಿರುವ ಕಾರ್ಮಿಕ ಪಿಂಚಣಿ ಯೋಜನೆಯಲ್ಲಿ ಒಂದು ಸಾವಿರ ಇದ್ದುದನ್ನು 10 ಸಾವಿರಕ್ಕೆ ಏರಿಕೆಯಾಗಬೇಕು. ಕನಿಷ್ಠ ವೇತನ 21ಸಾವಿರ ಮಾಡಬೇಕು. ಎನ್ಆರ್ಸಿ ಅಡಿಯಲ್ಲಿದ್ದ ಕಾರ್ಮಿಕರ ನೂರಾರು ಪ್ರಕರಣಗಳು ಇಂದು ಇತ್ಯರ್ಥವಾಗದೆ ಹಾಗೆ ಉಳಿದಿವೆ. ಇವೆಲ್ಲವುಗಳ ವಿರುದ್ಧ ಜನ ಸಿಡಿದೇಳುವ ಸಮಯ ಬಂದಿದ್ದು ಜ.8ರಂದು ಕರೆ ನೀಡಲಾದ ಮುಷ್ಕರದಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು ಎಂದು ಕರೆ ನೀಡಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಇಂದು ಕೈಗಾರಿಕೆಗಳು ಮುಚ್ಚಿಹೋಗಿದ್ದು, ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂದು ಜಿಡಿಪಿ ದರ 2.8ಕ್ಕೆ ಇಳಿದಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟ ಸಾಧ್ಯವಾಗುತ್ತದೆ. ಈಗಾಗಲೇ ಬಿಎಸ್ಎನ್ಎಲ್ ಅನ್ನು ಮುಚ್ಚಲಾಗುತ್ತಿದೆ. ಎಚ್ಎಎಲ್ನಿಂದ ಯಾವುದೇ ಉದ್ಯೋಗಗಳು ಸೃಷ್ಠಿಯಾಗಿಲ್ಲ. ಫುಡ್ಪಾರ್ಕ್ನಲ್ಲಿ ಕೆಲಸಗಳು ದೊರೆಯುತ್ತಿಲ್ಲ.
ಕೇವಲ ಆಡಂಬರದ ಮಾತುಗಳನ್ನು ಆಡುವ ಪ್ರಧಾನಿಗಳು ಇತ್ತೀಚೆಗೆ ತುಮಕೂರಿಗೆ ಭೇಟಿ ನೀಡಿದಾಗ ರೈತರ ಪರವಾಗಿ ಮಾತನಾಡಿಯೆ ಇಲ್ಲ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳಿಂದ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಾಗಿ, ಶಾಸನಬದ್ಧ ಭವಿಷ್ಯ ನಿಧಿ ಮತ್ತು ಪಿಂಚಣಿ, ಗುತ್ತಿಗೆ ಪದ್ಧತಿ ರದ್ಧತಿ, ಖಾಯಮೇತರ ಕೆಲಸಗಳ ಖಾಯಂಗಾಗಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ
ಬೆಲೆ ಏರಿಕೆ ನಿಯಂತ್ರಣಕ್ಕಾಗಿ,ss ಸಮಗ್ರ ಹಾಗು ಸಮರ್ಪಕವಾದ ಸಾರ್ವತ್ರಿಕ ಪಡಿತರ ವ್ಯವಸ್ಥೆಗಾಗಿ
ಗ್ರಾಮೀಣ ಸಂಕಷ್ಟವನ್ನುಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಹೂಡಿಕೆಗಾಗಿ, ಎಲ್ಲಾ ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಸಂಗ್ರಹ ಸೌಲಭ್ಯಗಳೊಂದಿಗೆ ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿಗಾಗಿ ಒತ್ತಾಯಿಸಿದರು.
ಎಐಯುಟಿಯುಸಿ ಜಿಲ್ಲಾ ಸಂಘಟನಾರರಾದ ಮಂಜುಳ ಮಾತನಾಡಿ, ರೈತರ ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ಸಮಾನ ಕನಿಷ್ಟ ವೇತನ ರೂ.21,000 ನಿಗದಿ ಮಾಡಬೇಕು. ಕಾರ್ಪೊರೇಟ್ ಬಂಡವಾಳದ ಪರವಾದ ಮತ್ತು ಕಾರ್ಮಿಕ ವಿರೋಧಿಯಾದ ಕಾರ್ಮಿಕ ಕಾನೂನುಗಳ ಸಂಹಿತೀಕರಣ ವಿರೋಧಿಸಿ, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಕೋರ್ಟುಗಳ ಸ್ಥಾಪನೆಗಾಗಿ ಹಾಗೂ ಎಲ್ಲಾ ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕೆಂಬ ಎಲ್ಐಸಿ ತೀರ್ಮಾನಗಳ ಜಾರಿಗಾಗಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಐಟಿಯುಸಿಯ ಸುಬ್ರಹ್ಮಣ್ಯ ಮಾತನಾಡಿ, ಜ.8ರಂದು ದೇಶದ ಎಲ್ಲಾ ಮೂಲೆಗಳಲ್ಲಿ ಮುಷ್ಕರ ಮಾಡಲಾಗುತ್ತದೆ. ಸುಮಾರು ಲಕ್ಷಾಂತರ ರೂಗಳ ಸೇರುವ ನಿರೀಕ್ಷೆ ಇದ್ದು, ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈ ಮುಷ್ಕರ ಮಾಡಲಾಗುತ್ತಿದ್ದು, ಎಲ್ಲರು ಬೆಂಬಲಿಸಬೇಕು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
