ಚಿಕ್ಕನಾಯಕನಹಳ್ಳಿ
ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಉನ್ನತೀಕರಿಸಿದ ಪಾಠಶಾಲಾ ಕಾಂಪೌಂಡ್ ಬಳಿ ಇರುವ ಅಂಗಡಿಗಳಲ್ಲಿ ಬೀಡಿ, ಸಿಗರೇಟು ವಸ್ತುಗಳ ಮಾರಾಟ ಮಾಡುತ್ತಿದ್ದು ಈ ಅಂಗಡಿಗಳನ್ನು ತೆರವು ಮಾಡುವಂತೆ ಶಾಲೆಯ ಎಸ್.ಡಿ.ಎಂಸಿ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.
ಶಾಲೆಯ ಕಾಂಪೌಂಡ್ ಸುತ್ತಲಿನ ರಸ್ತೆ ಬದಿ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು ಈ ಅಂಗಡಿಗಳಲ್ಲಿ ಬೀಡಿ, ಸಿಗರೇಟು ವಸ್ತುಗಳ ಮಾರಾಟ ಮಾಡುತ್ತಿದ್ದಾರೆ ಹಾಗೂ ಶಾಲೆಯ ಆವರಣದ ಸುತ್ತಮುತ್ತ ಬೀಡಿ ಸಿಗರೇಟು ಸೇದುವುದು ಹೆಚ್ಚಾಗಿದೆ. ನಿಯಮಾನುಸಾರ ಶಾಲೆಯ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಮಾರಾಟ ಮತ್ತು ಸೇವನೆ ನಿಷೇಧ ಕಾಯ್ದೆ ಇದೆ. ನಮ್ಮ ಶಾಲೆಯ ಸುತ್ತಮುತ್ತಲಿನಲ್ಲಿ ಈ ರೀತಿಯ ಚಟುವಟಿಕೆಗಳು ಕಂಡು ಬರುತ್ತಿದ್ದು ಹಾಗೂ ಈ ಅಂಗಡಿಗಳಿಂದ ಉಂಟಾಗುವ ಕಸ ಕೆಲವೊಮ್ಮೆ ಶಾಲಾ ಆವರಣದ ಒಳಗೂ ಕಾಣಿಸಿಕೊಂಡಿದೆ.
ಈ ಅಂಗಡಿಗಳಲ್ಲಿ ಎಗ್‍ರೈಸ್, ಕಬಾಬ್ ಅಂಗಡಿಗಳು, ಮೊಬೈಲ್ ಕ್ಯಾಂಟೀನ್ ವ್ಯಾಪಾರದಿಂದಾಗಿ ಕೆಲವು ವಿದ್ಯಾರ್ಥಿಗಳು ಶಾಲೆಯ ಊಟದ ಸಮಯದಲ್ಲಿ ಮತ್ತು ಶಾಲಾ ಅವಧಿಯ ನಂತರ ಈಚೆ ಹೋಗುತ್ತಿದ್ದು ಇದರಿಂದ ವಿದ್ಯಾರ್ಥಿಗಳು ರಸ್ತೆ ಬದಿಯ ತಿಂಡಿಗಳಿಗೆ ಹೊಂದಿಕೊಳ್ಳುತ್ತಿದ್ದಾರೆ ಹಾಗೂ ಈ ಸ್ಥಳದಲ್ಲಿ ಪೋಷಕರು, ವಿದ್ಯಾರ್ಥಿನಿಯರು ಓಡಾಡುವಲ್ಲಿ ತೊಂದರೆಯಾಗುತ್ತಿರುತ್ತದೆ ಹಾಗೂ ಶಾಲಾ ಆವರಣದಲ್ಲಿ ಸಂಜೆಯ ವೇಳೆ ಕಿಡಿಗೇಡಿಗಳು ಮದ್ಯಪಾನವನ್ನು ಮಾಡಿ ಮದ್ಯದ ಬಾಟಲಿಗಳನ್ನು ಬಿಸಾಡುತ್ತಿದ್ದಾರೆ. ಇದರಿಂದ ಈ ಶಾಲಾ ಜಾಗ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಆದ್ದರಿಂದ ಶಾಲಾ ಸುತ್ತಮುತ್ತಲಿನಲ್ಲಿರುವ ರಸ್ತೆಬದಿ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ ಉತ್ತಮ ಪರಿಸರಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








