ಹುಳಿಯಾರು : ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಹುಳಿಯಾರು

     ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಠಾರದಲ್ಲಿ (ವಿಜಯನಗರ) ನೀರಿಗೆ ಹಾಹಾಕಾರ ಉಂಟಾಗಿದ್ದು ಇಲ್ಲಿನ ನಿವಾಸಿಗಳು ದುಡ್ಡು ಕೊಟ್ಟು ನೀರು ಖರೀದಿಸುವಂತಾಗಿದೆ. ಹಾಗಾಗಿ ತಕ್ಷಣ ನೀರಿನ ಸಮಸ್ಯೆ ಪರಿಹರಿಸುವಂತೆ ಇಲ್ಲಿನ ಪಪಂ ಮಾಜಿ ಸದಸ್ಯೆ ಶಶಿಕಲಾ ಒತ್ತಾಯಿಸಿದ್ದಾರೆ.

     ವಠಾರದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಇನ್ನೂರೈವತ್ತಕ್ಕೂ ಹೆಚ್ಚು ಜನರಿದ್ದಾರೆ. ಇವರಿಗೆ ಇಲ್ಲಿಯವರೆವಿಗೂ ಕುಡಿಯುವ ನೀರು ಪೂರೈಸುತ್ತಿದ್ದ ಒಂದು ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು ದಿನಕ್ಕೆ ಹತ್ತು ನಿಮಿಷ ನೀರು ಬಂದರೆ ಹೆಚ್ಚು ಎನ್ನುವಂತ್ತಾಗಿದೆ.
ಪರಿಣಾಮ ಇಲ್ಲಿನ ನಿವಾಸಿಗಳು ಬಿಂದಿಗೆಗೆ ಎರಡ್ಮೂರು ರೂಪಾಯಿ ದುಡ್ಡು ಕೊಟ್ಟು ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ನೀರಿನ ಟ್ಯಾಂಕರ್ ಬಾರದಿದ್ದರೆ ಮಹಿಳೆಯರು, ಮಕ್ಕಳು ಇತರೆ ಬೀದಿಗಳಲ್ಲಿ ನೀರು ಬಿಟ್ಟಾಗ ಅವರನ್ನು ಕಾಡಿಬೇಡಿ ನೀರು ತರಬೇಕಿದೆ.

      ಇಲ್ಲಿನ ನಿವಾಸಿಗಳೆಲ್ಲರೂ ಸರ್ಕಾರದ ಆಶ್ರಯಮನೆ ಯೋಜನೆಯಲ್ಲಿ ನಿವೇಶನ ಪಡೆದು ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಂಡ ಬಡವರ್ಗದವರಾಗಿದ್ದಾರೆ. ಇವರು ಬೆಲೆ ಏರಿಕೆಯ ಹಾಗೂ ಕೂಲಿ ನಾಲಿ ಸಿಗದ ಈ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ದುತ್ಸರವಾಗಿದ್ದು ಕುಡಿಯುವ ನೀರು ದುಡ್ಡು ಕೊಟ್ಟು ಖರೀದಿಸುವುದು ಇವರಿಗೆ ಹೆಚ್ಚಿನ ಹೊರೆ ಬಿದ್ದಂತ್ತಾಗಿದೆ.

     ಅಂದು ಶಾಸಕರಾಗಿದ್ದ ಸಿ.ಬಿ.ಸುರೇಶ್ ಬಾಬು ಅವರು ನೀರಿನ ಸಮಸ್ಯೆ ಮನಗಂಡು ಕೊಳವೆ ಬಾವಿ ಕೊರಿಸಿದ್ದರು. ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರು ಮೋಟರ್, ಪಂಪು ಬಿಡಿಸಿದ್ದಾರೆ. ಆದರೆ ಇಷ್ಟೆಲ್ಲ ಕೆಲಸ ಮುಗಿದು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕೊಡದೆ ನಿರ್ಲಕ್ಷ್ಯಿಸಿದ್ದಾರೆ.

      ಈ ಬಗ್ಗೆ ಪಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಈ ಕೊಳವೆ ಬಾವಿಯನ್ನು ಜಿಪಂ ನಿಂದ ಪಪಂಗೆ ವರ್ಗಾಯಿಸಿಲ್ಲ ಎನ್ನುತ್ತಾರೆ. ಹಾಗಾಗಿ ಆಡಳಿತಾಧಿಕಾರಿಗಳು ಆಗಿರುವ ತಹಶಿಲ್ದಾರ್ ಅವರು ಈ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap