ಹುಳಿಯಾರು
ಹುಳಿಯಾರು ಹೋಬಳಿ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದ ಕೂಟುವೆ ಹತ್ತಿರ ಕಟ್ಟಿರುವ ಪಿಕಪ್‍ಗೆ ತಡೆ ಗೋಡೆಯನ್ನು ನಿರ್ಮಿಸಲಾಗುತ್ತಿದ್ದು ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ಲಕ್ಕೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಎರಡು ದಿನಗಳಿಂದ ತಡೆಗೋಡೆ ಕಾಮಗಾರಿ ಆರಂಭವಾಗಿದ್ದು ತಡೆ ಗೋಡೆಯನ್ನು ಸುಮಾರು 15-20 ಅಡಿಗಳಷ್ಟು ಹಳ್ಳದೊಳಗೆ ಹಾಕಲಾಗುತ್ತಿದೆ. ಇದರಿಂದ ಸುಮಾರು 15-20 ಅಡಿಯಷ್ಟು ಪಿಕಪ್ ಮುಚ್ಚಿ ಹೋಗುತ್ತದೆ. ಇದರಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಪಿಕಪ್ ಹಾಳಾಗುವ ಸ್ಥಿತಿ ತಲುಪಲಿದ್ದು ಪಿಕಪ್ ನಿರ್ಮಿಸಿದ ಉದ್ದೇಶವೇ ವ್ಯರ್ಥವಾಗಲಿದೆ ಎಂದಿದ್ದಾರೆ.
ಗುತ್ತಿಗೆದಾರರ ಗಮನಕ್ಕೆ ಸಮಸ್ಯೆ ತಂದರೂ ಸಹ ಅವರು ಇಂಜಿನಿಯರ್ ಬಂದು ಹೇಳಿದರಷ್ಟೇ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸ್ಥಳಿಯ ಶಾಸಕರು ಹಾಗೂ ಸಚಿವರು ಆಗಿರುವ ಜೆ.ಸಿ.ಮಾಧುಸ್ವಾಮಿಯವರ ಗಮನಕ್ಕೂ ಸಮಸ್ಯೆ ತರಲಾಗಿದೆ. ಆವರ ಸೂಚನೆಗೆ ಕಾಯದೆ ಕಾಮಗಾರಿ ಮುಂದುವರಿಸುತ್ತಿದ್ದಾರೆ.
ಇಲಾಖೆಯ ಇಂಜಿನಿಯರುಗಳು ಸ್ಥಳ ಪರಿಶೀಲಿಸಿ ಸರಿಪಡಿಸುವವರೆಗೂ ಕಾಮಗಾರಿ ತಡೆಹಿಡಿಯಬೇಕು ಎಂದು ಗ್ರಾಮಸ್ಥರ ಪರವಾಗಿ ಮಂಜುನಾಥ.ಎಲ್.ಎಚ್, ಸಿದ್ದರಾಮಯ್ಯ, ಗಿರೀಶ್‍ಹೋಯ್ಸಳಕಟ್ಟೆ, ಗೋವಿಂದಪ್ಪ, ರಮೇಶ್, ಕಾಂತರಾಜು, ಮರಿಯಣ್ಣ, ಸೋಮಶೇಖರ್, ಗಿರಿರಾಜು, ರಾಮಯ್ಯ.ಡಿ, ನರಸಿಂಹಯ್ಯ ಮತ್ತಿತರರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ