ಲೆಮಾರಿ ಸಮುದಾಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯ

ಚಿಕ್ಕನಾಯಕನಹಳ್ಳಿ

       ಇಪ್ಪತ್ತು ವರ್ಷಗಳಿಂದ ಅಲೆಮಾರಿ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರೂ, ಯಾವುದೇ ಸರ್ಕಾರ ಬಂದರೂ ನಮಗೆ ಸಹಕರಿಸದಿರುವುದನ್ನು ಖಂಡಿಸಿ ತಾಲ್ಲೂಕಿನಾದ್ಯಂತ ಇರುವ ಇಪ್ಪತ್ತೊಂದು ಸಾವಿರ ಅಲೆಮಾರಿ ಜನಾಂಗದವರು ಈ ಬಾರಿಯ 2019ರ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಅಲೆಮಾರಿ ಸಂಘಟನೆಯ ವೆಂಕಟೇಶ್ ಹೇಳಿದರು.

         ಪಟ್ಟಣದ ಗುಂಡುತೋಪು ಬಳಿ ಅಲೆಮಾರಿಗಳು ವಾಸಿಸುವ ಸ್ಥಳದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜಯಂತಿ ಸಂದರ್ಭದಲ್ಲಿ ಮಾತನಾಡಿದ ಅವರು, ಅಲೆಮಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಲವಾರು ಕಾರ್ಯಕ್ರಮಗಳು, ಸಭೆ, ಹೋರಾಟ ಮಾಡಿ ಜಿಲ್ಲಾಧಿಕಾರಿಗಳು, ಶಾಸಕರು, ರಾಜ್ಯಪಾಲರಿಗೆ ಮನವಿಗಳನ್ನು ಅರ್ಪಿಸಿದರೂ ಇದುವರೆವಿಗೂ ಯಾವ ಜನಪ್ರತಿನಿಧಿಯೂ ನಮ್ಮ ಸಮಸ್ಯೆ ಆಲಿಸಿಲ್ಲ ಹಾಗಾಗಿ ರಾಜ್ಯ ಅಲೆಮಾರಿ ಸಂಘಟನೆ ನಿರ್ಧಾರಕ್ಕೆ ಬಂದು ರಾಜ್ಯಾದ್ಯಂತ ಅಲೆಮಾರಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬಾರದು ಎಂದು ತೀರ್ಮಾನ ಕೈಗೊಂಡಿದ್ದೇವೆ ಅದರಂತೆ ತಾಲ್ಲೂಕಿನಲ್ಲಿಯೂ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದರು.

          ಫಿಂಜಾರ, ಕೊರಮ, ಹಂದಿಜೋಗಿ, ಚನ್ನದಾಸ, ದೊಂಬಿದಾಸ, ದೊಂಬರು, ಸುಡುಗಾಡುಸಿದ್ದರು, ಬುಡಗ-ಜಂಗಮ, ಕರಡಿಕಲಂದರ್, ದಕ್ಕಲಿಗ, ದರ್ವೇಶ್ ಇಂತಹ ಅಲೆಮಾರಿ ಸಮುದಾಯಗಳನ್ನು ನಾವು ಒಗ್ಗೂಡಿಸಿ ಸಂಘಟನೆ ಮಾಡಿದ್ದೇವೆ, ರಾಜಕೀಯ ನಾಯಕರು ಯಾರೊಬ್ಬರೂ ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿಲ್ಲ, ರಾಜಕೀಯ ನಾಯಕರಿಗೆ ನಮ್ಮಗಳ ಮತ ಅವಶ್ಯಕವಿದ್ದರೆ 24 ಗಂಟೆಯೊಳಗೆ ಆಗಮಿಸಿ ನಮ್ಮ ಸಮಸ್ಯೆ ಆಲಿಸಿ ಪರಿಹರಿಸಲು ಕ್ರಮಕೈಗೊಂಡರೆ ಮಾತ್ರ ಚುನಾವಣೆಗೆ ಮತ ಚಲಾಯಿಸುವುದೋ, ಬಿಡುವುದೋ ನಿರ್ಧಾರ ಮಾಡಲಾಗುತ್ತದೆ ಎಂದರು.

          ಅಲೆಮಾರಿ ಜನಾಂಗದ ಮುಖಂಡ ಶಾಂತರಾಜು ಮಾತನಾಡಿ, ನಮ್ಮ ಸಮುದಾಯದ ನಿವೇಶನ, ಬೀದಿದೀಪ, ಚರಂಡಿ, ರಸ್ತೆ ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳ ಧೋರಣೆಯನ್ನು ಖಂಡಿಸಿ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ, ಅಲೆಮಾರಿ ಸಮುದಾಯದ ಅವಶ್ಯಕತೆಗೆ ಅನುಗುಣವಾಗಿ ಅಲೆಮಾರಿ ಕೋಶವನ್ನು ಸರ್ಕಾರ ರಚಿಸಿದೆ ಆದರೆ ಸರ್ಕಾರ ನಿಗಧಿಪಡಿಸಿದ ಕೋಶದ ಅನುದಾನದ ಹಣ ಎಲ್ಲಿಗೆ ಹೋಯಿತು ಎಂದು ಇದುವರೆವಿಗೂ ತಿಳಿದಿಲ್ಲ, ನಮ್ಮ ಸಮಸ್ಯೆಗಳ ಬಗ್ಗೆ ಎಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದ್ದೇವೆ ಆದರೂ ಯಾವ ಪ್ರಯೋಜನವಾಗಲ್ಲಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಅಲೆಮಾರಿಗಳು ಚುನಾವಣೆಯಲ್ಲಿ ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದೇವೆ ಎಂದರು.

         ಮುಖಂಡ ರಾಜಪ್ಪ ಮಾತನಾಡಿ, ಮತದಾನವಾದ ನಂತರ ರಾಜಕಾರಣಿಗಳು ಅಲೆಮಾರಿಗಳು ಎಲ್ಲಿದ್ದಾರೆ ಎಂದು ತಿರುಗಿಯೂ ಸಹ ನೋಡುವುದಿಲ್ಲ, ನಾವು ಹಲವಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರೂ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ನಮ್ಮಗಳ ಮೇಲೆ ಹಿತಾಸಕ್ತಿಯಿಲ್ಲ ಎಂದು ದೂರಿದರು.ಈ ಸಂದರ್ಭದಲ್ಲಿ ಡಿಎಸ್‍ಎಸ್ ಮುಖಂಡರಾದ ಸಿ.ಎಸ್.ಲಿಂಗದೇವರು, ಕೃಷ್ಣಮೂರ್ತಿ, ಅಲೆಮಾರಿ ಸಮುದಾಯದ ವೆಂಕಟೇಶಯ್ಯ, ಗಂಗಮ್ಮ, ರಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link