ದಾವಣಗೆರೆ:
ನಗರದ ಹೊರವಲಯದ ಶಾಮನೂರು ಬಳಿಯ ಜೆ.ಎಚ್.ಪಟೇಲ್ ಬಡಾವಣೆಯ ಹಾಸ್ಟೆಲ್ ವರೆಗೂ ನಗರ ಸಾರಿಗೆ ಸಂಪರ್ಕ ವಿಸ್ತರಿಸಬೇಕೆಂದು ಒತ್ತಾಯಿಸಿ, ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‍ಒ ನಗರ ಘಟಕದ ಅಧ್ಯಕ್ಷೆ ಸೌಮ್ಯ, ಶಾಮನೂರು ಗ್ರಾಮದಿಂದ 2 ಕಿಮೀ ದೂರವಿರುವ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಬಿಸಿಎಂ ಇಲಾಖೆಯ ಬಾಲಕೀಯ ಹಾಸ್ಟೆಲ್‍ಗಳಿವೆ. ಈ ಹಾಸ್ಟೆಲ್‍ಗಳಿಂದ ನಿತ್ಯವೂ ನೂರಾರು ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಹೋಗಬೇಕಾದರೆ, ಸುಮಾರು ಎರಡು ಕಿ.ಮೀ. ದೂರದ ಶಾಮನೂರು ವರೆಗೆ ಕಾಲ್ನಡಿಗೆಯಲ್ಲಿ ಬಂದು ಬಸ್ ಹತ್ತಬೇಕಾದ ಪರಿಸ್ಥಿತಿ ಇದೆ ಎಂದರು.
ಪಟೇಲ್ ಬಡಾವಣೆಯ ಹಾಸ್ಟೆಲ್‍ನಿಂದ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಬರುವಾಗ, ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದ ಅವರು, ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಸಾಕಷ್ಟು ತೊಂದರೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಸಂಚರಿಸುವಾಗ ತೀವ್ರ ಭಯದಲ್ಲೇ ಸಾಗಬೇಕಾದಂತಹ ದುಸ್ಥಿತಿ ಇದೆ. ಈಗಾಗಲೇ ಭದ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿನಿಯರೊಂದಿಗೆ ಸಾಕಷ್ಟು ಅಹಿತಕರ ಘಟನೆಗಳೂ ಸಂಭವಿಸಿವೆ ಎಂದು ಆರೋಪಿಸಿದರು.
ಶಾಮನೂರು ವರೆಗೆ ಬರುವ ನಗರ ಸಾರಿಗೆಯ ಬಸ್‍ಗಳನ್ನು ಜೆ.ಎಚ್.ಪಟೇಲ್ ಬಡಾವಣೆಯ ವಿಸ್ತರಿಸಬೇಕೆಂಬುದಾಗಿ ಒತ್ತಾಯಿಸಿ, ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ ಅಕಸ್ಮಾತ್ ಯಾವುದಾದರು ಅನಾಹುತ, ದುರಂತ, ಅಹಿತಕರ ಘಟನೆಗಳು ನಡೆದರೆ ಯಾರು ಹೊಣೆ ಎಂಬುದಕ್ಕೆ ಜಿಲ್ಲಾಡಳಿತದ ಮೊದಲು ಉತ್ತರಿಸಬೇಕೆಂದು ಒತ್ತಾಯಿಸಿದರು.
ಹೆಣ್ಣು ಮಕ್ಕಳಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸಿಟಿ ಬಸ್ಸು ಸೇವೆ ಒದಗಿಸುವುದಿಲ್ಲವೆಂದರೆ ಏನರ್ಥ? ಇನ್ನಾದರೂ ಕೆಎಸ್‍ಆರ್‍ಡಿಸಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತುಕೊಂಡು ಜೆ.ಎಚ್.ಪಟೇಲ್ ಬಡಾವಣೆ ಯ ಎಸ್‍ಸಿ-ಎಸ್‍ಟಿ ಹಾಗೂ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ಮತ್ತು ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್‍ವರೆಗೂ ಸಿಟಿ ಬಸ್ಸು ಸೌಕರ್ಯ ಕಲ್ಪಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ನಾಗಜ್ಯೋತಿ, ಪೂಜಾ, ಆವ್ಯ, ಪುಷ್ಪಾ ಶ್ವೇತಾ, ಸುಧಾ, ಗಗನ, ಸುಶ್ಮಿತಾ ಮತ್ತಿತರರು ಭಾಗವಹಿಸಿದ್ದರು.