ಹುಳಿಯಾರು
ಹುಳಿಯಾರು ಹೋಬಳಿಯ ರಾಜಸ್ವ ನಿರೀಕ್ಷಕರಾದ ಎಚ್.ಮಂಜುನಾಥ್ ಅವರು ಹೆಜ್ಜೆಹೆಜ್ಜೆಗೂ ಕಿರುಕುಳ ನೀಡುತ್ತಿದ್ದು ಇದರಿಂದ ಮುಕ್ತಿ ಕೊಡಿಸಿ ಎಂದು ಹುಳಿಯಾರು ಹೋಬಳಿ ಗ್ರಾಮ ಸಹಾಯಕರು ಉಪತಹಸೀಲ್ದಾರ್ ಎಸ್.ಸೋಮೇಶ್ ಅವರಿಗೆ ಒಕ್ಕೊರಲ ಮನವಿ ಸಲ್ಲಿಸಿದ ಘಟನೆ ಶುಕ್ರವಾರ ಜರುಗಿದೆ.
ಸುಮಾರು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಹುಳಿಯಾರು ಹೋಬಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಸಂಬಳ ಕೊಡುತ್ತಿದ್ದು ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇಂತಹ ಕಷ್ಟದಲ್ಲೂ ರೈತರ ಮತ್ತು ಅಧಿಕಾರಿಗಳ ಕೊಂಡಿಯಾಗಿ ಪ್ರಾಮಾಣಿಕವಾಗಿ ಸಮಯದ ಪರಿವಿಲ್ಲದೆ, ಅನ್ನಹಾರದ ಅರಿವಿಲ್ಲದೆ ದುಡಿಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಹೀಗೆ ಕಪಟವಿಲ್ಲದೆ ದುಡಿಯುತ್ತಿರುವ ಗ್ರಾಮ ಸಹಾಯಕರಿಗೆ ಹುಳಿಯಾರು ಹೋಬಳಿ ರಾಜಸ್ವ ನಿರೀಕ್ಷಕರಾದ ಎಚ್.ಮಂಜುನಾಥ್ ಅವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರಗಳನ್ನೇ ನೆಪ ಮಾಡಿಕೊಂಡು ಏಕವಚನದಿಂದಲೂ, ಅವಾಚ್ಯ ಶಬ್ಧಗಳಿಂದಲೂ ಬಾಯಿಗೆ ಬಂದಂತೆ ಬಯ್ಯುತ್ತಾರೆ. ಕೆಲವೊಂದು ಸಂದರ್ಬದಲ್ಲಿ ಜಾತಿ ನಿಂದನೆ ಮಾಡಿದ ನಿದರ್ಶನಗಳೂ ಇವೆ ಎಂದು ಮನವಿ ಪತ್ರದಲ್ಲಿ ಆರೋಪಿಸಿರುವ ಗ್ರಾಮಸಹಾಯಕರು ಇವರ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳೂ ಸಹ ಜರುಗಿದೆ ಎಂದಿದ್ದಾರೆ.
ಇಷ್ಟು ವರ್ಷಗಳ ಕಾಲ ರಾಜಸ್ವ ನಿರೀಕ್ಷಕ ಹುದ್ದೆಗೆ ಗೌರವ ಕೊಟ್ಟು ಅವರ ಕಿರುಕುಳವನ್ನು ಸಹಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ಸಹನೆಯನ್ನೇ ಅವರು ದೌರ್ಬಲ್ಯ ಎಂದುಕೊಂಡು ಕಿರುಕುಳ ಮುಂದುವರಿಸುತ್ತಿದ್ದಾರೆ. ಇದರಿಂದ ಇವರ ಕೈ ಕೆಳಗೆ ಕೆಲಸ ಮಾಡುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದ್ದು ಮೇಲಧಿಕಾರಿಗಳು ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ನಮಗಾಗುತ್ತಿರುವ ಕಿರುಕುಳಕ್ಕೆ ಮುಕ್ತಿ ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
