ಒಣಗಿರುವ ತೆಂಗು : ಪರಿಹಾರಕ್ಕೆ ರೈತಸಂಘ ಆಗ್ರಹ

ಹಿರಿಯೂರು :

   ತಾಲ್ಲೂಕಿನಲ್ಲಿ 2016-17ನೇ ಸಾಲಿನಲ್ಲಿ ಒಣಗಿರುವ ತೆಂಗಿನ ಮರಗಳಿಗೆ ಬಂದಿರುವ ರೂ. 187 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ಜಮ ಮಾಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸೋಮವಾರ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ತೋಟಗಾರಿಕೆಇಲಾಖೆಯ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

    ಈ ಸಂದರ್ಭದಲ್ಲಿ ರೈತಸಂಘದ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಎಂಟತ್ತು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ, ಸಾವಿರಾರು ಎಕರೆ ಪ್ರದೇಶದಲ್ಲಿನ ಅಡಿಕೆ, ತೆಂಗು ಒಣಗಿದೆ. 40-50ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ತೋಟಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಒಣಗಿರುವ ಪ್ರತಿ ತೆಂಗಿನ ಮರಕ್ಕೆ ಸರ್ಕಾರ ರೂ.400 ನಿಗದಿಪಡಿಸಿ, ಹಣ ಬಿಡುಗಡೆ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಪರಿಹಾರದ ಹಣ ಸಿಕ್ಕಿಲ್ಲ ಎಂಬುದಾಗಿ ಆರೋಪಿಸಿದರು.

     ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ ಮಾತನಾಡಿ, ಅಧಿಕಾರ ವಹಿಸಿಕೊಂಡು 3 ತಿಂಗಳಾಗಿವೆ. ಈ ಅವಧಿಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿತ್ತು ಇದರ ನಡುವೆಯೂ ಸರ್ಕಾರದಿಂದ ಬಿಡುಗಡೆ ಆಗಿರುವ ರೂ.40.8 ಕೋಟಿಯಲ್ಲಿ 3746 ರೈತರ ಖಾತೆಗಳಿಗೆ ರೂ.37.6 ಕೋಟಿ ಪಾವತಿ ಮಾಡಲಾಗಿದೆ. ಚಾಲ್ತಿ ಇರದ ಬ್ಯಾಂಕ್ ಖಾತೆ ಮತ್ತು ಖಾತೆಗೆ ಆಧಾರ್ ಲಿಂಕ್ ಆಗದಿರುವುದರಿಂದ ಹಣ ಜಮಾವಣೆಯಾಗಿಲ್ಲ. ರೈತರಿಗೆ ಇನ್ನೂ ರೂ.32 ಲಕ್ಷ ಬಾಕಿ ಕೊಡಬೇಕಿದೆ ಎಂದು ಸ್ಪಷ್ಟಪಡಿಸಿದರು.

    2016-17ನೇ ಸಾಲಿನಲ್ಲಿ ನಡೆಸಿದ್ದ ಜಂಟಿ ಸಮೀಕ್ಷೆ ಆಧರಿಸಿ 1.10 ಲಕ್ಷ ತೆಂಗಿನ ಗಿಡಗಳಿಗೆ ಪರಿಹಾರ ನೀಡಲಾಗಿದೆ.ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳನ್ನು ಇಲಾಖೆಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ರೈತರ ದೂರು:

     ಕಡತಗಳನ್ನು ಅನುಮೋದನೆ ಮಾಡಲು ಚಿತ್ರದುರ್ಗದ ಉಪನಿರ್ದೇಶಕರ ಕಚೇರಿಯಲ್ಲಿ ಲಂಚ ನೀಡಬೇಕಿದೆ.ಇಲ್ಲವಾದಲ್ಲಿ ಅರ್ಜಿಯಲ್ಲಿರುವ ಯಾವುದಾದರೂ ದಾಖಲೆ ಕಿತ್ತು ಹಾಕಿ, ಇಂತಹ ದಾಖಲೆಇಲ್ಲ, ಅದನ್ನು ಕಳಿಸಿ ಎನ್ನುತ್ತಾರೆ.ರೈತರು ಕೊಟ್ಟಿರುವ ದಾಖಲೆಗಳಿಗೆ ಇಲಾಖೆಯವರು ಪ್ರಮಾಣಪತ್ರ ಕೊಡುವ ವ್ಯವಸ್ಥೆ ಆಗಬೇಕು ಎಂದು ರೈತರು ಆಗ್ರಹಿಸಿದರು.

    ಈ ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಕೆ.ಟಿ.ತಿಪ್ಪೇಸ್ವಾಮಿ, ಎ.ಕೃಷ್ಣಸ್ವಾಮಿ, ಆರ್.ಕೆ.ಸದಾಶಿವಪ್ಪ, ದಸ್ತಗೀರ್‍ಸಾಬ್, ಎಂ.ಆರ್.ಪುಟ್ಟಸ್ವಾಮಿ, ರಾಜಶೇಖರಯ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap