ದಾವಣಗೆರೆ:
ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ಓಜಿ ಕಾಲೋನಿ ಬಳಿಯ ಕೆಎಸ್ಆರ್ಟಿಸಿ ಡಿಪೋ ಸಮೀಪದಲ್ಲಿರುವ ರುದ್ರಭೂಮಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ತಿಮ್ಮಣ್ಣ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಶಿವರಾಂ ಅವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಎಸ್ಓಜಿ ಕಾಲೋನಿ ಸಮೀಪ ಸುಮಾರು 10 ಎಕರೆ ಜಾಗದಲ್ಲಿ ಶವ ಸಂಸ್ಕಾರಕ್ಕಾಗಿ ರುದ್ರಭೂಮಿಯನ್ನು ನಿರ್ಮಿಸಿದ್ದರು. ಈ ರುದ್ರಭೂಮಿಗೆ ದಾವಣಗೆರೆಯ ಅರ್ಧಭಾಗದಷ್ಟು ಜನರು ಇಲ್ಲೇ ಶವ ಸಂಸ್ಕಾರ ಮಾಡುತ್ತಿದ್ದಾರೆ.
ಆದರೆ, ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ ಎಂದು ಆರೋಪಿಸಿದರು.ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗಾಂಧಿ ನಗರ ರುದ್ರಭೂಮಿಯನ್ನು ಹೈಟೆಕ್ ಆಗಿ ಅಭಿವೃದ್ಧಿ ಪಡಿಸಿದ್ದರೆ, ಎಸ್ಓಜಿ ಕಾಲೋನಿ ರುದ್ರಭೂಮಿಗೆ ಶವ ಸಂಸ್ಕಾರ ಮಾಡಿದ ನಂತರದಲ್ಲಿ ಕೈಕಾಲು ತೊಳೆಯಲು ನೀರಿನ ಸೌಲಭ್ಯವಿಲ್ಲ. ವಿದ್ಯುತ್ ಹಾಗೂ ಆಸನದ ವ್ಯವಸ್ಥೆಗಳಿಲ್ಲ.
ಈ ರುದ್ರಭೂಮಿ ನಿರ್ಮಾಣವಾದ ಮೇಲೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ತಲಾ ಎರಡು ಬಾರಿ ಶಾಸಕರಾಗಿದ್ದು, ಯಾವ ಶಾಸಕರು ಸಹ ಈ ರುದ್ರಭೂಮಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿ ಪ್ರತಿನಿತ್ಯ 10ರಿಂದ 15 ಶವ ಸಂಸ್ಕಾರ ನಡೆಯುತ್ತಿದ್ದು, ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಹಣವಿದ್ದವರು ಟ್ಯಾಂಕರ್ ನೀರು ತರಿಸಿದರೆ, ಬಡವರು ಅಲ್ಲಿಲ್ಲಿ ನಿಂತ ನೀರಿನಲ್ಲೇ ಕೈಕಾಲು, ಮುಖತೊಳೆಯುವಂತಾಗಿದೆ. ಕಳೆದ 20 ವರ್ಷಗಳಿಂದಲೂ ಇದೇ ವ್ಯವಸ್ಥೆ ಮುಂದುವರೆದಿದ್ದು, ಶವ ಸಂಸ್ಕಾರದಲ್ಲಿ ಭಾಗವಹಿಸಲು ಪರಸ್ಥಳಗಳಿಂದ ಬರುವ ಸಾರ್ವಜನಿಕರು, ರುದ್ರಭೂಮಿಗೆ ಸೌಲಭ್ಯ ಕಲ್ಪಿಸದ ಪಾಲಿಕೆಗೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆಂದು ಹೇಳಿದರು.
ಇನ್ನು 15 ದಿನಗಳಲ್ಲಿ ರುದ್ರಭೂಮಿಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ 3 ಕೊಳವೆಬಾವಿ, ಮಿನಿ ವಾಟರ್ ಟ್ಯಾಂಕ್, ವಿದ್ಯುತ್, ದೇವಸ್ಥಾನ, ಆಸನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ, ಸ್ವಾಮೀಜಿಗಳ ನೇತೃತ್ವದಲ್ಲಿ ಬೀದಿಯಲ್ಲಿ ಭಿಕ್ಷಾಟನೆ ಕೈಗೊಳ್ಳುವ ಮೂಲಕವಿನೂತನ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಕವಿತಾ ಸೆಲ್ವರಾಜ್, ವೈ.ದಶರಥರಾಜ್, ವೆಂಕಟೇಶಪ್ಪ,ಎನ್.ವೀರೇಶ, ರೋಜಲಿನ್ ಆಡಂ, ಮುದ್ದೆ ಪ್ರಕಾಶ್, ವಾಸುದೇವ್ ಮತ್ತಿತರರು ಹಾಜರಿದ್ದರು.