ದಾವಣಗೆರೆ :
ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ (ಸೂಳೆಕೆರೆ) ಸೇರಿದಂತೆ ವಿವಿಧ ಸ್ಥಳಗಳನ್ನು ಪ್ರಮುಖ ಪ್ರಸಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಪ್ರವಾಸೋದ್ಯಮ ಇಲಾಖೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಚನ್ನಗಿರಿ ತಾಲೂಕಿನ ಶಾಂತಿ ಸಾಗರ (ಸೂಳೆಕೆರೆ), ಸಂತೇಬೆನ್ನೂರಿನ ಪುಷ್ಕರಣಿ, ಚನ್ನಗಿರಿಯ ಗಣಪತಿ ಹೊಂಡ, ಚನ್ನಗಿರಿ ಕೋಟೆ, ಜೋಳದಾಳ ಅಮ್ಮನ ಗುಡ್ಡ, ದೇವರಹಳ್ಳಿಯ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನ, ಹೊದಿಗೆರೆಯಲ್ಲಿರುವ ಷಹಾಜಿಭೋಸ್ಲೆ ಸಮಾಧಿ ಸ್ಥಳಗಳನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಅಂದಾಜು 43 ಕೋಟಿ ರೂ.ಗಳ ವೆಚ್ಚದಲ್ಲಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅಲಕಾ ಕನಸಲ್ಟ ಇಂಜನಿಯರಿಂಗ್ ಪ್ರೈವೇಟ್ ಲಿಮಿಟೆಡ್‍ನ ವಿನಾಯಕ್ ಮೇದ್ಕರ್ ಎಂಬುವರು ನೀಲ ನಕ್ಷೆ ತಯಾರಿಸಿದ್ದಾರೆ. ಈಗಾಗಲೇ ಸೂಳೆಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಡೆದಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಇನ್ನೂ ಏನೇನು ಆಗಬೇಕೆಂಬುದರ ಬಗ್ಗೆ ನೀಲ ನಕ್ಷೆ ತಯಾರಿಸಲಾಗಿದೆ.
ಅಲ್ಲದೆ, ಎಷ್ಟು ವೆಚ್ಚ ತಗಲಬಹುದೆಂಬುದರ ಬಗ್ಗೆಯೂ ಅಂದಾಜು ಮಾಡಲಾಗಿದೆ. ಈ ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ, ಈ ಬಗ್ಗೆ ತಾವು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಜೊತೆಗೆ ಚರ್ಚಿಸಿ, ಬೇಕಾಗಿರುವ ಅನುದಾನ ಬಿಡುಗಡೆ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಲಕಾ ಕನಸಲ್ಟಟ್ ಇಂಜನಿಯರಿಂಗ್ ಪ್ರೈವೇಟ್ ಲಿಮಿಟೆಡ್‍ನ ವಿನಾಯಕ್ ಮೇದ್ಕರ್ ಮಾತನಾಡಿ, ಸೂಳೆಕೆರೆಯಲ್ಲಿ (ಶಾಂತಿ ಸಾಗರದಲ್ಲಿ) ಬೋಟಿಂಗ್ ವ್ಯವಸ್ಥೆ, ಕಾರು ನಿಲುಗಡೆ, ಸೈಕಲ್ ಪಾಥ್, ಫುಡ್ ಕೋರ್ಟ್, ಯಾತ್ರಿ ನಿವಾಸ್, ಸಂಗೀತ ಕಾರಂಜಿ ವ್ಯವಸ್ಥೆ, ಡಕ್ಕಿಂಗ್ ಪ್ಲಾಟ್ ಫಾರ್ಮ್, ರಾತ್ರಿಯ ದೀಪಾಲಂಕಾರ ವ್ಯವಸ್ಥೆಯ ಜೊತೆಗೆ ಸೌಂಡ್ ಎಫೆಕ್ಟ್ ಕಲ್ಪಿಸವುದು. ಅಲ್ಲದೇ, ಶಾಂತಿ ಸಾಗರದ ಬಳಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ 100 ಆಸನಗಳ ವ್ಯವಸ್ಥೆ ಮಾಡಲು ತಾವು ಸಿದ್ಧ ಪಡಿಸಿರುವ ಡಿಪಿಆರ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಸಾಮಾನ್ಯವಾಗಿ ಪ್ರವಾಸಿ ತಾಣಗಳಿಗೆ ಸಂಜೆ ವೇಳೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಸೂಳೆಕೆರೆಯಲ್ಲಿ ಏನೇನು ಆಗಬೇಕಂಬುದನ್ನು ಡಿಪಿಆರ್‍ನಲ್ಲಿ ಸೇರಿಸಲಾಗಿದೆಯೋ ಅದರ ಜೊತೆಗೆ ಯೋಗಾ ಕೇಂದ್ರ, ಶಾಸ್ತ್ರೀಯ ಸಂಗೀತಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಲದೆ, ದೋಣಿ ವಿಹಾರದ ವೇಳೆಯಲ್ಲಿ ನುರಿತ ಈಜು ಪಟುಗಳು ಇರುವಂತೆ ಇರಬೇಕು. ಅಲ್ಲದೆ, ವಿಹಾರಿಗಳಿಗೆ ಗುಣಮಟ್ಟದ ಜಾಕೇಟ್ ನೀಡಬೇಕು. ಶಾಂತಿಸಾಗರ ಸುತ್ತಮುತ್ತ ಉತ್ತಮ ವಾತಾವರಣ ಸೃಷ್ಟಿಸಲು ಗಿಡ ನೆಡಬೇಕು ಎಂದರು.
ಇನ್ನೂ ಸಂತೆಬೆನ್ನೂರಿನ ಪುಷ್ಕರಣಿ ಅಭಿವೃದ್ಧಿಪಡಿಸಲು ಕೇಂದ್ರದ ಪ್ರಾಚ್ಯವಸ್ತು ಇಲಾಖೆಯಿಂದ ಅನುಮತಿ ಪಡೆದು ಲೈಟಿಂಗ್ ವ್ಯವಸ್ಥೆ, ಚನ್ನಗಿರಿಯ ಗಣಪತಿ ಹೊಂಡಕ್ಕೆ ಡ್ರೈನೇಜ್ ನೀರು ಹೋಗದಂತೆ ನೋಡಿಕೊಂಡು ಅಲ್ಲಿ ಶಿವನಮೂರ್ತಿ ಮಾಡಿ, ಸಾರ್ವಜನಿಕರು ಹೊಂಡಕ್ಕೆ ಹೋಗಲು ಅನುವಾಗುವಂತೆ ಮೆಟ್ಟಿಲುಗಳನ್ನು ಅಳವಡಿಸಬೆಕು. ಜೋಳದಾಳದ ಅಮ್ಮನ ಗುಡ್ಡವನ್ನು ಟ್ರಕ್ಕಿಂಗ್ ಸ್ಪಾಟ್ ಮಾಡುವ ಹಿನ್ನೆಲೆಯಲ್ಲಿ ಸುಮಾರು 6.5 ಕಿ.ಮೀ ದೂರ ಇರುವ ರಂಗನಗಿರಿವಿವ್ ಪಾಯಿಂಟ್‍ಗೆ ಹೋಗುವ ಸಾಹಸಿಗರು ವೇಸ್ಟ್‍ನ್ನು ಸಂಗ್ರಹಿಸಲು ಗ್ರೀನ್ ಬ್ಯಾಗ್‍ಗಳನ್ನು ನೀಡಬೇಕು.
ದೇವರಹಳ್ಳಿಯ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ರಥ ಬೀದಿ ಅಭಿವೃದ್ಧಿಪಡಿಸಲು ಉತ್ತಮ ಸಿಸಿ ರಸ್ತೆ ನಿರ್ಮಾಣ ಮಾಡಬೇಕು. 750 ಜನರ ಆಸನಗಳ ಸಮುದಾಯಭವನ ನಿರ್ಮಾಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹೊದಿಗೆರೆಯಲ್ಲಿರುವ ಷಹಾಜಿ ಅವರ ಸಮಾಧಿ ಸ್ಥಳಕ್ಕೆ ಹೋಗಿಬರುವ ಪ್ರವಾಸಿಗರು ತಂಗಲು ಯಾತ್ರಿ ನಿವಾಸ ನಿರ್ಮಾಣ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಯಾತ್ರಿ ನಿವಾಸ ನಿರ್ಮಾಣಕ್ಕೆ ಜಾಗದ ಕೊರತೆ ಇದೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಾಠಾಣದ ಜಾಗ ನೋಡಿ ಅಲ್ಲಿ ಯಾತ್ರಿ ನಿವಾಸ್ ನಿರ್ಮಾಣ ಮಾಡಿ ಎಂದರು.
ಸಭೆಯಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಪಿ.ಕುಮಾರಸ್ವಾಮಿ, ಚನ್ನಗಿರಿ ತಹಶೀಲ್ದಾರ, ಭೂಸೇನಾ ನಿಗಮದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ