ಬೆಂಗಳೂರು
ರಾಜ್ಯದ ಸಾಧಾರಣ ಬರಪೀಡಿತ ತಾಲೂಕುಗಳ ರೈತರಿಗೆ ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( ಎನ್‍ಡಿಆರ್‍ಎಫ್) ವತಿಯಿಂದ ಪರಿಹಾರ ಒದಗಿಸಲು 2016ರ ಬರನಿರ್ವಹಣೆ ಕೈಪಿಡಿಗೆ ಸೂಕ್ತ ತಿದ್ದುಪಡಿ ತರುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಗುರುವಾರ ಪತ್ರ ಬರೆದಿರುವ ದೇಶಪಾಂಡೆ, ಎನ್ ಡಿಆರ್‍ಎಫ್ ನಿಯಮದ ಪ್ರಕಾರ, ತೀವ್ರ ಬರಗಾಲ ಪೀಡಿತ ಹಾಗೂ ಶೇ.50 ಇಲ್ಲವೇ ಅದಕ್ಕೂ ಹೆಚ್ಚಿನ ಪ್ರಮಾಣದ ಬೆಳೆ ನಾಶವಾಗಿರುವ ತಾಲೂಕುಗಳಿಗೆ ಮಾತ್ರ ಆರ್ಥಿಕ ನೆರವು ದೊರೆಯುತ್ತಿದೆ. ಆದರೆ, ಸಾಧಾರಣ ಬರಪೀಡಿತ ಹಾಗೂ ಶೇ.33ರಿಂದ 50ರಷ್ಟು ಪ್ರಮಾಣದ ಬೆಳೆ ನಾಶವಾಗಿರುವ ತಾಲೂಕುಗಳು ಈ ಪರಿಹಾರದಿಂದ ವಂಚಿತವಾಗುತ್ತಿವೆ ಎಂದು ಗಮನ ಸೆಳೆದಿದ್ದಾರೆ.
ಈಗಾಗಲೇ ಕೃಷಿ ವಲಯ ಸಂಕಷ್ಟದಲ್ಲಿದ್ದು, ರೈತರು ಕೃಷಿ ಮುಂದುವರಿಸಿಕೊಂಡು ಹೋಗಲು ಪರದಾಡುವಂತಹ ಪರಿಸ್ಥಿತಿ ಇದೆ. ಆದ್ದರಿಂದ ಪ್ರಾಧಿಕಾರದ ನಿಯಮಗಳಿಗೆ ಬದಲಾವಣೆ ತಂದು ಸಾಧಾರಣ ಬರಪೀಡಿತ ತಾಲೂಕುಗಳನ್ನು ಕೂಡ ಪರಿಹಾರಕ್ಕೆ ಪರಿಗಣಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಎನ್‍ಡಿಆರ್ ಎಫ್ ಮಾನದಂಡಗಳ ಅನುಸಾರ ಶೇ.33ರಿಂದ 50ರಷ್ಟು ಬೆಳೆ ನಾಶ ಅನುಭವಿಸಿದ ತಾಲೂಕುಗಳಿಗೆ ಇನ್‍ಪುಟ್ ಸಬ್ಸಿಡಿ ವಿತರಿಸಬೇಕು. ಆದರೆ, ಅದನ್ನು ವಿತರಿಸಲಾಗುತ್ತಿಲ್ಲ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ಈ ಅಂಶವನ್ನು ಕೂಡ ಪರಿಗಣಿಸಬೇಕು ಎಂದು ದೇಶಪಾಂಡೆ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
