ಚಿತ್ರದುರ್ಗ:
ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಬೇಕಾದರೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಬಿಜೆಪಿ.ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವ ಮೂಲಕ ಬಿಜೆಪಿ.ರಾಷ್ಟ್ರಾಧ್ಯಕ್ಷರನ್ನು ಒತ್ತಾಯಿಸಲಾಯಿತು.
ಆರನೆ ಬಾರಿಗೆ ಶಾಸಕರಾಗಿರುವ ಜಿ.ಹೆಚ್.ತಿಪ್ಪಾರೆಡ್ಡಿ ಎರಡು ಬಾರಿ ಬಿಜೆಪಿ.ಯಿಂದ ಒಂದು ಬಾರಿ ವಿಧಾನಪರಿಷತ್‍ಗೆ ಆಯ್ಕೆಯಾಗಿದ್ದಾರೆ. ಅಪಾರ ರಾಜಕೀಯ ಅನುಭವವಳ್ಳ ಇವರಿಗೆ ಮಂತ್ರಿ ಸ್ಥಾನ ನೀಡಿದರೆ ಜಿಲ್ಲೆ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಗೆಲುವಿಗೆ ಇವರ ಪಾತ್ರ ಅಪಾರವಾಗಿದೆ. ಇಲ್ಲಿಯವರೆಗೂ ನಮ್ಮ ಜಿಲ್ಲೆಗೆ ಹೊರಗಿನವರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗುತ್ತಿದ್ದಾರೆ. ಹಾಗಾಗಿ ಈ ಸಾರಿ ಮಾತ್ರ ನಮ್ಮವರೆ ಆದ ಜಿ.ಹೆಚ್.ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು.
ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಇವುಗಳಿಂದ ಬರಪೀಡಿತ ಚಿತ್ರದುರ್ಗ ಜಿಲ್ಲೆ ವಂಚಿತವಾಗಿದೆ. ಪಕ್ಷ ಬೇದ, ಜಾತಿ ಲೆಕ್ಕಾಚಾರವಿಲ್ಲದೆ ಜಿ.ಹೆಚ್.ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ವಂದೆ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮನವಿ ಮಾಡಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ತಾಲೂಕು ಅಧ್ಯಕ್ಷ ಟಿ.ಆನಂದ್, ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಹನುಮಂತರಾಯ ಚೌಳೂರು, ಯುವರಾಜ್, ಮಂಜುನಾಥ್, ಚೌಡೇಶ್, ರಾಮು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.