ದಾವಣಗೆರೆ:
ವಿಧಾನಸಭಾ ಉಪ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಗಳಿಗೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಡೆದ ರಾಜಕೀಯ ಮೇಲಾಟದಿಂದಾಗಿ ಎದುರಾದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಹಗಲಿರಳು ಶ್ರಮಿಸಿದ್ದಾರೆ. ಆದರೆ, ಬಿಜೆಪಿ ಹರಿಸಿದ ಹಣದ ಹೊಳೆ ಹಾಗೂ ಅಧಿಕಾರದ ದುರುಪಯೋಗದಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ.
ಆದರೂ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರು ನಂಬಿರುವ ತತ್ವ ಸಿದ್ಧಾಂತ, ಮೌಲ್ಯಗಳಿಗೆ ಕೈಗನ್ನಡಿಯಾಗಿದೆ ಎಂದು ತಿಳಿಸಿರುವ ಡಿ.ಬಸವರಾಜ್, ಈ ಇಬ್ಬರು ನಾಯಕರುಗಳ ರಾಜೀನಾಮೆಯಿಂದ ಅವರಿಗೆ ವೈಯಕ್ತಿಕವಾಗಿ ಏನೂ ನಷ್ಟ ಆಗಲಾರದು. ಆದರೆ, ಕಾಂಗ್ರೆಸ್ ಪಕ್ಷ ಸಂಘಟನೆಗೆ ದೊಡ್ಡ ನಷ್ಟ ಉಂಟಾಗುವ ಸಂಭವ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೈಕಮಾಂಡ್ ಮತ್ತು ಸೋನಿಯಾಗಾಂಧಿ ರಾಜೀನಾಮೆಯನ್ನು ಅಂಗೀಕರಿಸದೇ, ಅದೇ ಸ್ಥಾನಗಳಲ್ಲಿ ಮುಂದುವರೆಯುವಂತೆ ಇಬ್ಬರ ಮನವೊಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರು ಜನಪ್ರಿಯ ಜನನಾಯಕರಾಗಿದ್ದು, ಅವರ ಸ್ಥಾನವನ್ನು ಮತ್ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ. ಅದೇರೀತಿ ದಿನೇಶ್ ಗುಂಡೂರಾವ್ ಅವರು ಸಂಘಟನಾ ಚತುರರಾಗಿದ್ದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ರಾಜ್ಯ ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಬ್ಬರ ಸೇವೆಯು ಅತ್ಯಗತ್ಯವಾಗಿದ್ದು, ರಾಜ್ಯದಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಪಕ್ಷದ ಹೈಕಮಾಂಡ್ ಈ ಇಬ್ಬರು ನಾಯಕರ ಮನವೊಲಿಸಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಬರಲಿರುವ ದಿನಗಳಲ್ಲಿ ಮೂಲ ಬಿಜೆಪಿಗರು ಮತ್ತು ಪಕ್ಷಾಂತರಿಗಳ ಮಧ್ಯೆ ಭಿನ್ನಮತ ಉಲ್ಬಣಗೊಳ್ಳುವುದು ನೂರಕ್ಕೆ ನೂರು ಸತ್ಯವಾಗಿದೆ. ಮೂಲ ಬಿಜೆಪಿಯವರು ಮುಂದಿನ ದಿನಗಳಲ್ಲಿ ಅವರ ಸರ್ಕಾರದ ವಿರುದ್ಧವೇ ದಂಗೆ ಎಳುವುದರಲ್ಲಿಯಾವುದೇ ಸಂಶಯವಿಲ್ಲ. ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಗಾದಿಗೆ ಏರಿಸಿದ ಪಕ್ಷಾಂತರಿಗಳು ದೊಡ್ಡ ಬೇಡಿಕೆ ಪಟ್ಟಿಯನ್ನೇ ಇಡಲಿದ್ದಾರೆ. ಒಳ್ಳೊಳ್ಳೆ ಖಾತೆಗಳನ್ನು ಕೇಳಲಿದ್ದಾರೆ. ಅವರ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನದ ಬೇಡಿಕೆ ಮಂಡಿಸಲಿದ್ದಾರೆ. ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಘೋಷಿಸಲು ಅಲ್ಲಿನ ಶಾಸಕ ಆನಂದ್‍ಸಿಂಗ್ ಪಟ್ಟು ಹಿಡಿಯಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿಯಲ್ಲಿ ಮಂತ್ರಿಮಂಡಲ ವಿಸ್ತರಣೆ ದಿನದಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಭಿನ್ನಮತ ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈಗ ಕರ್ನಾಟಕ ನೆನಪಾಯಿತೆ?:
ನಾಲ್ಕು ತಿಂಗಳ ಕಾಲ ಕರ್ನಾಟಕ ಅತಿವೃಷ್ಟಿಯಿಂದ ಜಲ ಪ್ರಳಯಕ್ಕೆ ತುತ್ತಾಗಿ, ಲಕ್ಷಾಂತರ ಜನ, ಜಾನುವಾರು ಬೀದಿಗೆ ಬಿದ್ದರೂ ಸಹ ನೆರವಿಗೆ ಬಾರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೊಂದ ಜನರ ಸಂಕಷ್ಟದ ಬಗ್ಗೆ ಒಂದೇ ಒಂದು ಮಾತನಾಡದೇ, ಈಗ ನೂರಾರು ಕೋಟಿ ಹಣ ಪಡೆದು ಪಕ್ಷಾಂತರ ಮಾಡಿ, ಸುಪ್ರೀಂ ಕೋರ್ಟ್‍ನಿಂದ ಅನರ್ಹರೆಂದು ಘೋಷಿಸಲ್ಪಟ್ಟಿರುವ ಜನಪ್ರತಿನಿಧಿಗಳು ಪುನರ್ ಆಯ್ಕೆಯಾದಾಗ ದೂರದ ಜಾರ್ಖಾಂಡ್‍ನ ಚುನಾವಣಾ ಪ್ರಚಾರದಲ್ಲಿ ಕರ್ನಾಟಕವನ್ನು ನೆನಪಿಸಿಕೊಂಡಿರುವುದು ನಾಡಿನ ಜನರ ಸೌಭಾಗ್ಯ ಎಂದು ಡಿ.ಬಸವರಾಜ್ ಲೇವಡಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
