ತಿಪಟೂರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಸೇರ್ಪಡೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರನಗೆರೆ ಶಾಖೆಯನ್ನು ಪುನರಾರಂಭಿಸಲು ಒತ್ತಾಯಿಸಿರುವ ಡಿ.ಎಸ್.ಎಸ್. ಸಂಘಟನೆ ಇಂದು ಬ್ಯಾಂಕ್ ಬಾಗಿಲು ಮುಚ್ಚಿ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು.ಧರಣಿ ನೇತೃತ್ವ ವಹಿಸಿದ್ದ ಡಿ.ಎಸ್.ಎಸ್. ನ ತಾಲ್ಲೂಕು ಅಧ್ಯಕ್ಷ ಶೆಟ್ಟಿಹಳ್ಳಿ ಕಲ್ಲೇಶ್ ಮಾತನಾಡಿ, ಹಿಂದೆ ಇದ್ದ ಮಾರನಗೆರೆ ಎಸ್.ಬಿ.ಐ ಶಾಖೆ ನಗರದ ಹೃದಯಭಾಗದಲ್ಲಿದ್ದು ಸ್ತ್ರೀ ಶಕ್ತಿ ಸಂಘದವರಿಗೆ, ವಯೋವೃದ್ದರಿಗೆ, ಪಿಂಚಣಿ ಹಣ ಪಡೆಯುವವರಿಗೆ ಮತ್ತು ರೈತರು, ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರ ನಡೆಸಲು ಅತ್ಯಂತ ಸೂಕ್ತವಾಗಿತ್ತು.
ಇದೀಗ ಆ ಬ್ಯಾಂಕ್ ಅನ್ನು ಎಸ್.ಬಿ.ಐ ನೊಂದಿಗೆ ಸೇರ್ಪಡೆ ಮಾಡಿದ್ದೂ ಅಲ್ಲದೇ, ಮುಖ್ಯ ಕಛೇರಿಗೆ ವರ್ಗಾವಣೆ ಮಾಡಿರುವುದರಿಂದ ಸಾಮಾನ್ಯ ಜನರು, ಹೊಸದಾಗಿ ಖಾತೆ ಮಾಡಿಸಿಕೊಳ್ಳುವವರು ಮತ್ತು ಮಹಿಳೆಯರಿಗೆ ತೊಂದರೆಯಾಗಿದೆ. ಸಿಬ್ಬಂದಿ ವರ್ತನೆ, ಬಾಷಾ ಸಮಸ್ಯೆಯಿಂದ ಜನ ರೋಸಿ ಹೋಗಿದ್ದಾರೆ.
ದಿನವಿಡೀ ಬ್ಯಾಂಕಿನಲ್ಲಿ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇದು ಜನ ವಿರೋಧಿ ಕ್ರಮ, ಆದ್ದರಿಂದ ಸಂಭಂದಪಟ್ಟವರು ಕೂಡಲೆ ಸೂಕ್ತ ಕ್ರಮ ಕೈಗೊಂಡು ಮಾರನಗೆರೆ ಶಾಖೆಯನ್ನು ಯಥಾ ಪ್ರಕಾರ ಮುಂದುವರೆಸಿ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕು, 15 ದಿನದೊಳಗೆ ಕ್ರಮ ಜರುಗದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿ. ಈ ಸಂಬಂಧ ಮನವಿ ಪತ್ರವನ್ನು ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್‍ರಿಗೆ ನೀಡಿದರು. ಈ ಸಂದರ್ಭ ಮುಖಂಡರಾದ ಸೂಗೂರು ಪ್ರಕಾಶ್. ಹರೀಶ್ ಗೌಡ, ನರಸಿಂಹಯ್ಯ. ಶಂಕರಲಿಂಗಪ್ಪ. ಮುಂತಾದವರು ಇದ್ದರು.
ಮಾರನಗೆರೆ ಶಾಖೆಯನ್ನು ಇಲ್ಲಿಗೆ ಸ್ಥಳಾಂತರಿಸುವ ಮುಂಚೆಯೇ ಪ್ರತಿಭಟನೆ ನಡೆಸಬೇಕಿತ್ತು. ಹಾಲಿ ನಮ್ಮ ಬ್ಯಾಂಕಿನಲ್ಲಿ 15 ಸಾವಿರ ಖಾತೆಗಳಿದ್ದು, ಹೆಚ್ಚುವರಿಯಾಗಿ 30 ಸಾವಿರ ಖಾತೆಗಳನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಸಂಜೆ 4 ಗಂಟೆಯ ಒಳಗೆ ಟೋಕನ್ ಪಡೆದ ಗ್ರಾಹಕರ ಸೇವೆಯನ್ನು ಮುಗಿಸಿದ ನಂತರ ಮನೆಗೆ ಹೋಗುತ್ತೇವೆ. ಮೊದಲ ಅಂತಸ್ತಿನಲ್ಲಿರುವ ಈ ಶಾಖೆಯಲ್ಲಿ ವಯೋವೃದ್ದರಿಗೆ, ಅಂಗವಿಕಲರಿಗೆ, ಸ್ಕೈವಾಕ್ ಇಲ್ಲದಿರುವುದು ನಿಜ, ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು.–ಪಾಲಾಕ್ಷ. ಡೆಪ್ಯೂಟಿ ಮೇನೇಜರ್. ಎಸ್.ಬಿ.ಐ. ಮುಖ್ಯ ಶಾಖೆ. ತಿಪಟೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ