ರೈತನ ಬಳಿ ರಾಗಿ ಇದ್ದಾಗಲೇ ಖರೀಧಿ ಕೇಂದ್ರ ತೆರೆಯಿರಿ

ಹುಳಿಯಾರು:

   ರಾಗಿ ಬೆಳೆಗೆ ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ದಶಕಗಳ ನಂತರ ಉತ್ತಮ ಇಳುವರಿ ಬಂದಿದ್ದು ರೈತರು ಸಂಭ್ರಮ ಮತ್ತು ಸಡಗರದಿಂದ ಕಣದ ಕೆಲಸದಲ್ಲಿ ತೊಡಗಿದ್ದಾನೆ. ಆದರೆ ದಿಡೀರ್ ಬೆಲೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದ್ದು ತಕ್ಷಣ ರಾಗಿ ಖರೀಧಿ ಕೇಂದ್ರ ತೆರೆಯಲಿ ಎಂಬುದು ರಾಗಿ ಬೆಳೆಗಾರರ ಬೇಡಿಕೆಯಾಗಿದೆ.

     ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ 2018-19 ನೇ ಸಾಲಿನಲ್ಲಿ 26,020 ಹೆಕ್ಟೆರ್ ರಾಗಿ ಬಿತ್ತನೆಯ ಗುರಿ ಇಟ್ಟುಕೊಂಡಿದ್ದು 19,700 ಹೆಕ್ಟೆರ್ ಪ್ರಗತಿ ಸಾಧಿಸಲಾಗಿದೆ. ಈ ವರ್ಷ ಕಾಲಕಾಲಕ್ಕೆ ಉತ್ತಮ ಮಳೆಯಾದ ಪರಿಣಾಮ ಬಿತ್ತನೆಯಾಗಿರುವ ಅಷ್ಟೂ ಪ್ರದೇಶದಲ್ಲಿ ಉತ್ತಮ ಇಳುವರಿ ಬಂದಿದ್ದು 1 ಹೆಕ್ಟರ್‍ಗೆ 20 ಕ್ವಿಂಟಾಲ್ ಇಳುವರಿ ಬಂದಿದೆ ಎಂದರೂ ತಾಲೂಕಿನಲ್ಲಿ 3.5 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್ ಇಳುವರಿ ಬಂದಿರಬಹುದೆಂದು ಅಂದಾಜಿಸಲಾಗಿದೆ.

     ಸುಗ್ಗಿ ಕಾಲ ಆರಂಭಕ್ಕೂ ಮುನ್ನ ಕ್ವಿಂಟಲ್ ರಾಗಿಗೆ ಮೂರ್ನಲ್ಕು ಸಾವಿರ ಇದ್ದ ಬೆಲೆ ರಾಗಿ ಕೂಯ್ಲು ಆರಂಭವಾದ ತಕ್ಷಣ ದಿಡೀರ್ ಎರಡು ಸಾವಿರ ರೂ. ಆಸುಪಾಸಿಗೆ ಕುಸಿದಿದೆ. ಈ ಬಗ್ಗೆ ಹುಳಿಯಾರಿನ ರಾಗಿ ವರ್ತಕರಾದ ಎಲ್.ಆರ್.ಬಾಲಾಜಿ ಅವರನ್ನು ಪ್ರಶ್ನಿಸಿದರೆ ಅವಕ ಹೆಚ್ಚಾಗಿರುವ ಜೊತೆಗೆ ರಾಗಿತೆನೆ ಮಳೆಗೆ ಸಿಲುಕಿ ಕಪ್ಪು ಬಣ್ಣಕ್ಕೆ ತಿರುಗಿದ್ದು ಕೆಂಪು ರಾಗಿ ರಫ್ತು ಆಗುತ್ತಿದ್ದ ತಮಿಳುನಾಡು, ಕೇರಳ, ಮಹರಾಷ್ಟ್ರ ರಾಜ್ಯಗಳಲ್ಲಿ ಕಪ್ಪು ರಾಗಿಯ ಬೇಡಿಕೆ ಕುಸಿತದಿಂದ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ.

      ಕಳೆದ ಏಳೆಂಟು ವರ್ಷಗಳಿಂದ ಬಿತ್ತಿದ್ದ ರಾಗಿ ಕೈ ಸೇರದೆ ನಷ್ಟ ಅನುಭವಿಸಿದ್ದ ರೈತರು ಈ ವರ್ಷ ಕೈ ಹಿಡಿದಿರುವ ರಾಗಿಯಿಂದ ಒಂದಿಷ್ಟು ಲಾಭದ ನಿರೀಕ್ಷೆಯಲ್ಲಿದ್ದರು. ಸರ್ಕಾರ ಕೂಡ 3200 ರೂ. ಬೆಂಬಲ ಬೆಲೆ ಘೋಷಿಸಿ ರೈತನ ಮೊಗದಲ್ಲಿ ಮಂದಹಾಸ ತಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರೂ ಇನ್ನೂ ಖರೀಧಿ ಕೇಂದ್ರ ಆರಂಭಿಸದಿದ್ದರಿಂದ ಹಣದ ಅಗತ್ಯ ಇರುವ ರೈತರು ಈಗಾಗಲೇ ಕೊಟ್ಟಷ್ಟು ಬೆಲೆಗೆ ರಾಗಿ ಮಾರುತ್ತಿದ್ದಾರೆ.

    ಒಂದು ಕ್ವಿಂಟಾಲ್ ರಾಗಿ ಬೆಳೆಯಲು ಕನಿಷ್ಟ 2 ಸಾವಿರ ರೂ. ಖರ್ಚಾಗುತ್ತಿದ್ದು ಅದಕ್ಕಿಂತಲೂ ಕಡಿಮೆ ಬೆಲೆ ಮಾರುಕಟ್ಟೆಯಲ್ಲಿದ್ದು ರೈತನ ಗೋಳು ಕೇಳುವವರಾರು ಇಲ್ಲದಂತ್ತಾಗಿದೆ. ರಾಗಿ ಕೊಯ್ಲು ಆರಂಭದ ದಿನದಲ್ಲೇ ಸರ್ಕಾರ ಖರೀಧಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಪಾತಾಳ ಸೇರುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಲಕ್ಷ್ಯದಿಂದ ವರ್ತಕರಿಗೆ ಲಾಭವಾಗುತ್ತಿದ್ದು ಹಬ್ಬ, ಮದುವೆ, ವಿದ್ಯಾಭ್ಯಾಸ ಎಂದು ರೈತ ಬೆಳೆದ ರಾಗಿಯನ್ನೆಲ್ಲಾ ಮಾರುವ ಮುಂಚೆ ಖರೀಧಿ ಕೇಂದ್ರ ತೆರೆಯುವ ಅಗತ್ಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link