ಚಿಕ್ಕನಾಯಕನಹಳ್ಳಿ 

ತಾಲ್ಲೂಕಿನ 26 ಕೆರೆಗಳಿಗೆ ಕುಡಿಯುವ ನೀರು ಹರಿಸುವ ಹೇಮಾವತಿ ಯೋಜನೆಯ ಕಾಮಗಾರಿಯು ವೇಗ ಹೆಚ್ಚಿಸಿಕೊಳ್ಳಬೇಕು. ವೇಗ ಹೆಚ್ಚಾದರೆ ಮುಂದಿನ ಆರು ತಿಂಗಳೊಳಗೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವುದಕ್ಕೆ ಚಾಲನೆ ನೀಡಬಹುದು ಎಂದು ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಗಳನಹಳ್ಳಿ ಭಾಗದಲ್ಲಿ ಹೇಮಾವತಿ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತಾಲ್ಲೂಕು ಶಾಶ್ವತ ಕುಡಿಯುವ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ, ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.ತಾಲ್ಲೂಕಿನಲ್ಲಿ ಹೇಮಾವತಿ ಯೋಜನೆಯ ಕಾಮಗಾರಿ ಬಹಳ ವರ್ಷಗಳಿಂದ ನಡೆÀಯುತ್ತಿದೆ. ಇತ್ತೀಚೆಗೆ ಕಾಮಗಾರಿ ಚುರುಕು ಕಂಡರೂ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಹೋಲಿಸಿದರೆ ಹೇಮಾವತಿ ಯೋಜನೆಯ ವೇಗ ಕಡಿಮೆಯಿದೆ.
ಹೇಮಾವತಿ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಿಕೊಂಡರೆ ಈ ವರ್ಷದ ಕೊನೆಯ ವೇಳೆಗಾದರೂ ತಾಲ್ಲೂಕಿನ ಜನತೆಗೆ ನೀರು ದೊರಕಿ, ಜನತೆ ಹರ್ಷ ವ್ಯಕ್ತಪಡಿಸುವ ಜೊತೆಗೆ ಯೋಜನೆ ಸಾರ್ಥಕತೆ ಪಡೆಯುತ್ತದೆ ಎಂದರಲ್ಲದೆ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿದರೆ ನೀರಿಲ್ಲದೆ ಒಣಗುತ್ತಿರುವ ತೋಟ, ಜಮೀನುಗಳಿಗೆ ಅನುಕೂಲವಾಗುತ್ತದೆ. ರೈತರು ಉತ್ತಮ ಫಸಲು ಪಡೆಯಲು ಸಹಾಯವಾಗುತ್ತದೆ ಎಂದರು.
ತಾಲ್ಲೂಕು ಶಾಶ್ವತ ಕುಡಿಯುವ ನೀರಾವತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಪರಮೇಶ್ವರ್ ಮಾತನಾಡಿ, ಹೇಮಾವತಿ ಕಾಮಗಾರಿಯನ್ನು ಮೂರು ತಿಂಗಳ ಹಿಂದೆ ವೀಕ್ಷಣೆ ಮಾಡಿದ್ದೆವು. ನಂತರ ಲಾಕ್ ಡೌನ್ ಉಂಟಾಗಿ ಸಂಚರಿಸಲು ಅವಕಾಶ ದೊರೆತ ಮೇಲೆ ಪುನಃ ವೀಕ್ಷಣೆ ಮಾಡುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರಲ್ಲದೆ, ಹೇಮಾವತಿ ಕಾಮಗಾರಿಗಾಗಿ ಈ ಹಿಂದೆ ಶಾಶ್ವತ ನೀರಾವತಿ ಹೋರಾಟ ಸಮಿತಿ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆ, ಸ್ವಾಮೀಜಿಗಳ ಜೊತೆಗೂಡಿ ತಾಲ್ಲೂಕನ್ನು ಬಂದ್ ಮಾಡಿ, ಕೆ.ಬಿ.ಕ್ರಾಸ್‍ವರೆಗೂ ಪಾದಯಾತ್ರೆ ಮಾಡಲಾಗಿತ್ತು ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ತಾಲ್ಲೂಕಿಗೆ ಹರಿಯುವ ಕುಡಿಯುವ ನೀರಿಗಾಗಿ ಜನರು ಸಾರ್ವಜನಿಕವಾಗಿ ಹೋರಾಟಕ್ಕೆ ಸಹಕರಿಸಿದ್ದರು. ನಂತರ ಕಾಮಗಾರಿಯು ನಡೆಯುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿಗೆ ಶೀಘ್ರ ಹೇಮಾವತಿ ನೀರಿನ ಜೊತೆಗೆ ಎತ್ತಿನಹೊಳೆ, ಭದ್ರಾ ನೀರು ಹರಿದು ಜನ, ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಿಎಸ್‍ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ತಿಗಳನಹಳ್ಳಿ ರೈತ ಶಿವಕುಮಾರ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
