ತುಮಕೂರು
ಚಿಕ್ಕನಾಯಕನಹಳ್ಳಿ ತಾ. ಹುಳಿಯಾರು ಹೋಬಳಿ, ಡಿಂಕನಹಳ್ಳಿ ಗ್ರಾಮದಲ್ಲಿ 400 ಕೆ.ವಿ. ಸ್ಟಿಚ್ಚಿಂಗ್ ಸ್ಟೇಷನ್ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳ ಬದಲಾವಣೆ ಮಾಡಿ ರೈತರ ಫಲವತ್ತಾದ ಭೂಮಿಯನ್ನು ಉಳಿಸಿ ಪಕ್ಕದಲ್ಲೇ ಇರುವ ಸರ್ಕಾರಿ ಜಾಗದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸುವ ಕುರಿತು ಸ್ಥಳ ಪರಿಶೀಲಿಸಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕೃಷಿಕ ಸಮಾಜದ ಕೋಡಿಹಳ್ಳಿ ಜಗದೀಶ್ ತಿಳಿಸಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ನೀಡಿ, ರೈತರ ಜಮೀನು ಉಳಿಸುವಂತೆ ಕೋರಿದರು.
ಕೆ.ಪಿ.ಟಿ.ಸಿ.ಎಲ್. ನವರು ಡಿಂಕನಹಳ್ಳಿ ಗ್ರಾಮದ ಸರಹದ್ದಿನಲ್ಲಿ ರೈತರ ಜಮೀನುಗಳನ್ನು ಗುರಿಯಾಗಿಸಿ ಸುಮಾರು 41 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿ ರೈತರ ಸಭೆ ಕರೆದು ಚರ್ಚಿಸಲಾಗಿದೆ. ಆ ಸಭೆಯಲ್ಲಿ ಸಂತ್ರಸ್ತ ರೈತರುಗಳು ಈ ವಶಪಡಿಸಿಕೊಳ್ಳುತ್ತಿರುವ ಜಮೀನು ಫಲವತ್ತಾಗಿದ್ದು ತೋಟಗಾರಿಕೆ ಬೆಳೆಗಳು ಇರುತ್ತವೆ. ಇದಕ್ಕೆ ಕೂಗಳತೆ ದೂರದಲ್ಲಿ ಸಕಲ ಸೌಲಭ್ಯವುಳ್ಳ ಬರಗಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದು ಇದು ಬಂಜರು ಭೂಮಿಯಾಗಿರುತ್ತದೆ.
ಆದ್ದರಿಂದ ಈ ಜಾಗದಲ್ಲಿ 400 ಕೆವಿ ಸ್ಟಿಚ್ಚಿಂಗ್ ಸ್ಟೇಷನ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬಹುದು. ಇದರಿಂದ ರೈತರಾದ ನಮ್ಮಗಳಿಗೆ ಫಲವತ್ತಾದ ಭೂಮಿಯೂ ಉಳಿಯುತ್ತದೆ. ಸರ್ಕಾರಕ್ಕೆ ಆರ್ಥಿಕವಾಗಿ ಅನುಕೂಲವಾಗುತ್ತದೆ ಎಂದು ಬ್ರಹ್ಮಸಂದ್ರ ಪುಟ್ಟರಾಜು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಆದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏಕಪಕ್ಷೀಯವಾಗಿ ಅದು ನಾವು ಹೇಳಿದ ಹಾಗೆ ನಡೆಯಬೇಕು ಎಂದು ರೈತರ ಅಳಲಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲವೆಂದು ಹಾಗೂ ಸಭೆಗೆ ಬಂದಿರುವ ರೈತರ ಹಾಜರಾತಿ ಸಹಿಯನ್ನು, ರೈತರು ಬರೆದುಕೊಟ್ಟ ಒಪ್ಪಿಗೆ ಪತ್ರದ ಸಹಿಯಾಗಿ ಅಧಿಕಾರಿಗಳು ಮಾರ್ಪಾಡು ಮಾಡಿದ್ದಾರೆಂದು ಸಂತ್ರಸ್ತ ಸುಮಾರು 70 ಕ್ಕೂ ಹೆಚ್ಚು ರೈತರುಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
