ಮಾರುಹೊಳೆ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿ

ಹುಳಿಯಾರು

         ಹುಳಿಯಾರು ಹೋಬಳಿಯ ಗಾಣದಾಳು ಗ್ರಾಪಂ ವ್ಯಾಪ್ತಿಯ ಮಾರುಹೊಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಅನೇಕ ಮೂಲಸೌಲಭ್ಯಗಳಿಂದ ವಂಚಿತಗೊಂಡು ಕೆಲವೊಂದು ಸಮಸ್ಯೆಗಳಿಂದ ನಲುಗುತ್ತಿದ್ದು ಶಾಲೆಗೆ ಕಾಯಕಲ್ಪ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

         ಗ್ರಾಮೀಣ ಪ್ರದೇಶದಲ್ಲಿರುವ ಈ ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಈ ಶಾಲೆಗೆ ಸುಸಜ್ಜಿತ ಆಟದ ಮೈದಾನವಾಗಲಿ, ಕೊಠಡಿಗಳಲ್ಲಿ ಇಲ್ಲವಾಗಿದೆ. ಇರುವ ಮೂರು ಕೊಠಡಿಗಳಲ್ಲಿ ಒಂದು ಹೊಸದಾಗಿದ್ದರೆ ಇನ್ನು ಎರಡು ಕೊಠಡಿಗಳು ಹಳೆಯದಾಗಿದ್ದು ಇರುವ ಮೂರು ಕೊಠಡಿಗಳಲ್ಲೇ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಪಾಠ ನಡೆಯುತ್ತದೆ. ಶಿಕ್ಷಕರ ಕೊರತೆ ಕಂಡು ಬಾರದಿದ್ದರೂ ಶಾಲಾ ಕಟ್ಟಡಗಳು ಮಾತ್ರ ಕಳಾಹೀನವಾಗಿದ್ದು ಮಳೆ ಬಂದರೆ ಗೋಡೆಗಳ ಮೂಲಕ ನೀರು ಹರಿಯುತ್ತದೆ, ಒಡೆದ ಹೆಂಚಿನ ಮೂಲಕ ತೊಟ್ಟಿಕ್ಕುತ್ತದೆ .ತೀರುಗಳು ಗೆದ್ದಲು ಹಿಡಿದಿರುವುದರಿಂದ ಯಾವಾಗ ಮುರಿದು ಬೀಳುತ್ತದೆಯೋ ಎಂಬ ಭಯದಿಂದ ಪಾಠ ಕೇಳುವಂತಾಗಿದೆ.

         ಶಾಲೆಗೆ ಕಾಂಪೌಂಡ್ ಕೂಡ ಇಲ್ಲ ಆಧುನಿಕ ಶಿಕ್ಷಣದ ಕೊರತೆ ಕಂಡುಬರುತ್ತದೆ. ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲದೆ ಬಳಕೆ ಮಾಡಲು ಕಷ್ಟವಾಗಿದೆ, ಶಾಲೆಯ ಸ್ಥಿತಿಗತಿ ನೋಡಿದರೆ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ಈಗಿನ ಕಾಲದಲ್ಲೂ ಈ ತರ ಶಾಲೆಗಳು ಇರುತ್ತವೆ ಎಂದರೆ ನಂಬಲಾಗುವುದಿಲ್ಲ ಎನ್ನುವ ಮಟ್ಟಕ್ಕೆ ಶಾಲೆಯಿದ್ದು ಶಾಲೆಯ ಸಮಸ್ಯೆ ಬಗ್ಗೆ, ಅಗತ್ಯತೆಗಳ ಪಟ್ಟಿ ಮಾಡಿ ಉನ್ನತಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಕೂಡ ಪ್ರಯೋಜನವಾಗಿಲ್ಲ.

         ಎಲ್ಲಾ ಶಾಲೆಗಳ ಹಾಗೆ ನಮ್ಮ ಶಾಲೆಯು ಇರಲಿ ಎಂಬುದು ಗ್ರಾಮಸ್ಥರ ಆಶಯವಾಗಿದ್ದು ಸದ್ಯ ಶೈಕ್ಷಣಿಕ ವರ್ಷ ಮುಗಿದಿದ್ದು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವದರೊಳಗೆ ಶಾಲೆಯ ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಿ ಕಾಂಪೌಂಡ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಉತ್ತಮ ವಾತಾವರಣ ಕಲ್ಪಿಸಬೇಕು ಎಂಬುದು ಮಾರುಹೊಳೆ ಗ್ರಾಮಸ್ಥರ ಆಗ್ರಹವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link