ಹುಳಿಯಾರು
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಕೆ.ಸಿ.ಪಾಳ್ಯ ಸಮೀಪದ ಓರಿಸಿದ್ಧಯ್ಯನಪಾಳ್ಯದ ಕೈಪಂಪು ದುರಸ್ತಿ ಮಾಡಿಸುವಂತೆ ಇಲ್ಲಿನ ನಿವಾಸಿ ಗೌರಮ್ಮ ಅವರು ಮನವಿ ಮಾಡಿದ್ದಾರೆ.ಓರಿಸಿದ್ಧಯ್ಯನಪಾಳ್ಯದ ನಿವಾಸಿಗಳ ನೀರಿನ ಆಸರೆಗೆ ಇರುವುದೊಂದೇ ಕೈ ಪಂಪು. ಈ ಕೈಪಂಪು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಿದೆ. ಆದರೆ ಕಳೆದ ಹತ್ತದಿನೈದು ದಿನಗಳಿಂದ ಕೈಪಂಪು ಕೆಟ್ಟು ಒಂದು ಹನಿ ನೀರು ಬಾರದಾಗಿದೆ.
ಪರಿಣಾಮ ಹನಿ ನೀರಿಗೂ ಹಾಹಾಕಾರ ನಿರ್ಮಾಣವಾಗಿದ್ದು ದಿನ ಬೆಳಗಾದರೆ ಸಮೀಪದ ತೋಟಗಳಿಗೆ ಹೋಗಿ ಮಾಲೀಕರನ್ನು ಕಾಡಿಬೇಡಿ ನೀರು ತರುವ ದುಸ್ಥಿತಿ ಬಂದೋದಗಿದೆ. ಒಮ್ಮೊಮ್ಮೆ ಮೋಟರ್ ಲೈನ್ ಕರೆಂಟ್ ಹಗಲು ಬಾರದಿದ್ದರೆ ರಾತ್ರಿಹೊತ್ತು ತೋಟಕ್ಕೆ ಹೋಗಿ ನೀರು ತರಬೇಕಿದೆ.
ಈ ಪಾಳ್ಯಕ್ಕೆ ಸಿಸ್ಟನ್ ಅಳವಡಿಸಿ ಕಿರು ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವಂತೆ ಪ್ರತಿ ಚುನಾವಣೆಗೆ ಮತ ಕೇಳಲು ಬಂದವರ ಬಳಿ ಕೇಳಿಕೊಂಡಿದ್ದೇವೆ. ಆದರೆ ಮತ ಕೇಳಲು ಬಂದವರು ಗೆದ್ದ ನಂತರ ತಿರುಗಿ ನೋಡುವುದಿಲ್ಲ. ಪರಿಣಾಮ ಇಂದು ನೀರಿನ ಸಮಸ್ಯೆ ಹೆಚ್ಚಾಗಿದೆ.
ತಕ್ಷಣ ನೀರು ಸರಬರಾಜು ಇಲಾಖೆಯ ಸಹಾಯಕ ಎಂಜಿನಿಯರ್ ಅವರು ಇತ್ತ ಗಮನ ಹರಿಸಿ ತಕ್ಷಣ ಇಲ್ಲಿನ ಕೈ ಪಂಪು ದುರಸ್ತಿ ಮಾಡಿಸುವ ಜೊತೆಗೆ ಸಿಸ್ಟನ್ ಅಳವಡಿಸಿ ಪಂಚಾಯ್ತಿ ಬೋರ್‍ವೆಲ್‍ನಿಂದ ನೀರು ತುಂಬಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ