ಕಾಡು ಪ್ರಾಣಿಗಳಿಂದ ಬೆಳೆ ನಾಶ : ತಹಸೀಲ್ದಾರರಿಗೆ ಮನವಿ

ಪಾವಗಡ

     ತಾಲ್ಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರುವ ಕಾರಣ ರೈತರಿಗೆ ತುಂಬಲಾರದ ನಷ್ಟವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪ ತಿಳಿಸಿದರು.

     ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಹಸಿರು ಸೇನೆ ಮುಖಂಡರು ಪೂಜಾರಪ್ಪ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ಬರ ತಾಂಡವವಾಡುತ್ತಿದ್ದು ಸಾವಿರಾರು ಕೃಷಿ ಕುಟುಂಬಗಳು ಕೃಷಿ ತ್ಯಜಿಸಿ ವಲಸೆ ಹೋಗಿದ್ದು, ಇರುವ ಸಣ್ಣಪುಟ್ಟ ರೈತರು ಕೃಷಿಯಿಂದ ಜೀವನ ಸಾಗಿಸುತ್ತಿದ್ದಾರೆಂದರು.

      ಕೃಷಿ ಚಟುವಟಿಕೆಯಲ್ಲಿ ತೊಡಗಿ ಬೆಳೆಗಳನ್ನು ಬೆಳೆಯಲು ಮುಂದಾದರೆ ಕಾಡು ಪ್ರಾಣಿಗಳಾದ ಕರಡಿ , ಹಂದಿ , ಜಿಂಕೆ ಮತ್ತು ನವಿಲುಗಳ ಕಾಟ ಹೆಚ್ಚಾಗಿದ್ದು ಇವು ಬೆಳೆಗಳಿಗೆ ಬರುವುದರಿಂದ ಅಪಾರವಾದ ಬೆಳೆ ನಷ್ಟ ರೈತನಿಗೆ ಉಂಟಾಗುತ್ತಿದೆ. ಆರಣ್ಯ ಇಲಾಖೆ ಕಾಡುಪ್ರಾಣಿಗಳನ್ನು ರೈತರ ಬೆಳೆಗಳಿಗೆ ಬಾರದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆಂದರು.

      ರೈತರ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟ ಪರಿಹಾರಕ್ಕೆ ಅರ್ಜಿ ನೀಡಿದರೆ ಇಲಾಖೆ ಆರು ನೂರು ಅಥವಾ ಸಾವಿರದ ಒಳಗೆ ಪರಿಹಾರ ವಿತರಣೆ ಮಾಡುತ್ತಿದ್ದು ಕಳೆದ ಹಲವು ವರ್ಷಗಳಿಂದ ಸಾಲದ ಕೂಪಕ್ಕೆ ಸಿಲುಕಿದ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದು ಅರಣ್ಯ ಇಲಾಖೆ ಪರಿಹಾರ ವಿತರಣೆ ಪುನರ್ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಮುಂದಾಗಬೇಕೆಂದು ಒತ್ತಾಯಿಸಿದರು.

       ಮನವಿ ಪತ್ರ ಸ್ವೀಕರಿಸಿ ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿ ಕಾಡು ಪ್ರಾಣಿಗಳ ಹಾವಳಿ ತಡೆಯುವುದು ಹಾಗೂ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ವಿತರಣಿ ಮಾಡುವಂತೆ ಸೂಚಿಸಲಾಗುವುದೆಂದರು.

      ಈ ಸಂದರ್ಭದಲ್ಲಿ ತಹಸೀಲ್ದಾರ್ ವರದರಾಜು , ರೈತ ಮುಖಂಡರಾದ ಶಿವಕುಮಾರ್ , ನರಸಿಂಹಮೂರ್ತಿ , ನಾಗಭೂಷಣ , ರಾಮಾಂಜಿನಪ್ಪ , ನಾಗರಾಜು , ಕೃಷ್ಣಪ್ಪ , ನಾರಾಯಣ ನಾಯ್ಕ್ , ಅಶ್ವತ್ಥಪ್ಪ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap