ತುಮಕೂರು
ಜಿಎಸ್‍ಟಿ ಕಾಯ್ದೆಯ ನಿಯಮಗಳನ್ನು ಪದೆಪದೆ ತಿದ್ದುಪಡಿ ಮಾಡಿ ಗೊಂದಲ ಉಂಟುಮಾಡಲಾಗುತ್ತದೆ, ಕಾಯ್ದೆಯ 36(4) ನಿಯಮ ರದ್ದುಪಡಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕು ಮತ್ತು ಸೇವಾ ಕಾಯ್ದೆ ಅನ್ವಯ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಂತೆ ಪ್ರತಿ ತಿಂಗಳು ಜಿಎಸ್‍ಟಿ ರಿಟರ್ನ್ ಸಲ್ಲಿಸಲು ಕಷ್ಟವಾಗುತ್ತಿದೆ ಎಂದು ಹೇಳಿ, ಜಿಎಸ್‍ಟಿ ಕಾಯ್ದೆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜಿಎಸ್ ವೃತ್ತದಲ್ಲಿ ಜಮಾವಣೆಗೊಂಡ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದರು. ಡಿಸಿ ಕಚೇರಿ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆಡಿಟರ್ ಪ್ರಕಾಶ್, ಜಿಎಸ್‍ಟಿ ಕಾಯ್ದೆಯನ್ನು ವರ್ತಕರು, ಕೈಗಾರಿಕೋದ್ಯಮಿಗಳು ವಿರೋಧ ಮಾಡುತ್ತಿಲ್ಲ. ಆದರೆ, ಅದರಲ್ಲಿನ ನಿಯಮಾವಳಿಗಳನ್ನು ಸರಳೀಕರಣ ಮಾಡಬೇಕು ಎಂಬುದು ಒತ್ತಾಯವಾಗಿದೆ ಎಂದು ಹೇಳಿದರು.ನಿಯಮ 36(4)ರ ಪ್ರಕಾರ ವ್ಯವಹಾರಸ್ಥರು ಜಿಎಸ್‍ಟಿ ರಿಟರ್ನ್ ಸಲ್ಲಿಕೆ ಮಾಡಿದ್ದರೂ ತಮ್ಮ ಸರಬರಾಜುದಾರರು ಜಿಎಸ್‍ಟಿ ರಿಟರ್ನ್ ಸಲ್ಲಿಸದಿದ್ದರೆ, ಇವರ ರಿಟರ್ನ್‍ನ್ಸ್‍ಗೆ ಮಾನ್ಯತೆ ದೊರೆಯವುದಿಲ್ಲ. ಈ ನಿಯಮ ಅವೈಜ್ಞಾನಿಕ, ಯಾರೊ ಮಾಡಿದ ತಪ್ಪಿಗೆ ಇನ್ನಾರೊ ದಂಡ ತೆರುವಂತಾಗಿದೆ. ಈ ನಿಯಮ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ವರ್ತಕರು, ಉದ್ಯಮಿಗಳು ಕೇಂದ್ರ ಸರ್ಕಾರಕ್ಕೆ ಈ ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ, ಇದರಿಂದ ಜಿಎಸ್‍ಟಿ ರಿಟರ್ನ್ ಸಲ್ಲಿಸುವವರಿಗೆ ಅನಾನುಕೂಲವಾಗಿದೆ ಎಂದು ಹೇಳಿದರು.ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್ ಮಾತನಾಡಿ, ನಮ್ಮ ಎಲ್ಲಾ ದಾಖಲಾತಿ, ಜಿಎಸ್‍ಟಿ ರಿಟರ್ನ್‍ನ್ಸ್ ಪಾವತಿಯಾಗಿದ್ದರೂ ಸರಬರಾಜುದಾರರು ಮಾಡುವ ತಪ್ಪಿಗೆ ನಮಗೆ ತೊಂದರೆ ಮಾಡುವ ಕ್ರಮ ಸರಿಯಲ್ಲ. ಕಾಯ್ದೆಯ 36(4) ನಿಯಮವನ್ನು ರದ್ದು ಮಾಡಬೇಕು. ಮೂಲ ಜಿಎಸ್‍ಟಿ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಜಿಎಸ್‍ಟಿ ನಿಯಮಗಳನ್ನು ಪದೇಪದೆ ಬದಲಾವಣೆ ಮಾಡಿ ಗೊಂದಲ ಉಂಟು ಮಾಡುವುದನ್ನು ನಿಲ್ಲಿಸಬೇಕು, ಸರಳ ನಿಯಮಗಳನ್ನು ರೂಪಿಸಬೇಕು, ಮೂಲ ಜಿಎಸ್‍ಟಿ ಕಾಯ್ದೆಯ ನಿಯಮ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ. ಹೆಚ್. ಪರಮಶಿವಯ್ಯ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹ ಕಾರ್ಯದರ್ಶಿ ಸಂಜಯ್, ಖಜಾಂಚಿ ಸತ್ಯನಾರಾಯಣ್, ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಣ್ಣ ಕೈಗಾರಿಕೆಗಳ ಸಂಘ, ಧಾನ್ಯ ವ್ಯಾಪಾರಿಗಳ ಸಂಘ, ಜುವೆಲ್ಲರಿ ಅಸೋಸಿಯೇಷನ್, ಅಟೊಮೊಬೈ ಲ್ ಅಸೋಸಿಯೇಷನ್, ರೈಸ್‍ಮಿಲ್ ಅಸೋಸಿಯೇಷನ್ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿಗಳ ಕಚೇರಿ ನಂತರ ಕೇಂದ್ರ ಜಿಎಸ್‍ಟಿ ಕಚೇರಿ ಹಾಗೂ ರಾಜ್ಯ ಸರ್ಕಾರದ ಜಿಎಸ್‍ಟಿ ಕಚೇರಿಗೂ ತೆರಳಿ ಅಲ್ಲಿನ ಅಧಿಕಾರಿಗಳ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ