ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ರೈತ ಸಂಘ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಚಳುವಳಿ ನಿರಂತರವಾಗಿ ನಡೆಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯೆ ತೋರುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುರುವಾರ ಮತ್ತೊಮ್ಮೆ ಚಳುವಳಿ ನಡೆಸಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಚಳ್ಳಕೆರೆ ನಗರದ ಮೂಲಕ ಹಾದುಹೋಗುವ ರೈಲು ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಪ್ರಯಾಣಿಕರು ಹಾಗೂ ವಾಣಿಜ್ಯೋದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾರಕ್ಕೆ ಎರಡು ಬಾರಿ ಸಂಚರಿಸುವ ಜೈಪುರ್ ಎಕ್ಸಪ್ರೆಸ್ ಮತ್ತು ವಾರಣಾಸಿ ಎಕ್ಸಪ್ರೆಸ್ ರೈಲುಗಳನ್ನು ಚಳ್ಳಕೆರೆ ನಿಲ್ದಾಣದಲ್ಲಿ ನಿಲುಗಡೆಯಾಗಬೇಕು.
ಪಾವಗಡ ರಸ್ತೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಶಾಲಾ ಮಕ್ಕಳ ಸಾರ್ವಜನಿಕರ ಮಹಿಳೆಯರ ಪರದಾಟಕ್ಕೆ ಅಂತ್ಯ ಆಡಬೇಕು. ಬೇಡಿಕೆ ಈಡೇರಿಕೆಗೆ ರೈಲ್ವೆ ಇಲಾಖೆ ಅಲಕ್ಷೆ ತೋರಿದಲ್ಲಿ ಉಗ್ರ ಚಳುವಳಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಸಮಾಜ ಸೇವಕ ಎಸ್.ಎಚ್.ಸೈಯದ್ ಮಾತನಾಡಿ, ಕಳೆದ ಸುಮಾರು 27 ವರ್ಷಗಳಿಂದ ಚಳ್ಳಕೆರೆ ನಗರ ರೈಲು ಸೌಲಭ್ಯ ಪಡೆದಿದ್ದು, ದಿವಂಗತ ಜಾಫರ್ ಶರೀಫ್‍ರವರ ನಿರಂತರ ಪ್ರಯತ್ನದಿಂದ ಈ ಭಾಗದ ಜನರು ರೈಲಿನ ಸೌಲಭ್ಯ ಪಡೆದಿದ್ಧಾರೆ. ಮೇಲ್ಸೇತುವೆ ನಿರ್ಮಾಣ ಮಾಡಿದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಸುಮಾರು 10 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರ ಹಿತದೃಷ್ಠಿಯಿಂದ ಈ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸುವಂತೆ ಒತ್ತಾಯಿಸಿದರು.
ರೈಲ್ವೆ ಇಲಾಖೆಯ ಪರವಾಗಿ ಮನವಿ ಸ್ವೀಕರಿಸಿದ ಟ್ರಾಫೀಕ್ ಇನ್ಸ್‍ಪೆಕ್ಟರ್ ಡಿ.ಶಿವಾನಂದ ಮಾತನಾಡಿ, ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ನೀಡಿರುವ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಪ್ರಸ್ತುತ ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ನೇತಾಜಿ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ, ಜೀವವಿಮಾ ಪ್ರತಿನಿಧಿ ಪರಸಪ್ಪ, ಮಾಜಿ ಪುರಸಭಾ ಸದಸ್ಯ, ದೂರವಾಣಿ ಸಂಪರ್ಕ ಇಲಾಖೆ ಸಲಹಾ ಸಮಿತಿ ಸದಸ್ಯ ಆರ್.ಪ್ರಸನ್ನಕುಮಾರ್ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಎಚ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಡಿ.ಟಿ.ಮಂಜುನಾಥ, ಐ.ತಿಪ್ಪಾರೆಡ್ಡಿ, ಎ.ಟಿ.ತಿಪ್ಪೇಸ್ವಾಮಿ, ಫರೀದ್‍ಖಾನ್, ನಿವೃತ್ತ ಎಎಸ್‍ಐ ಆಷಮ್ ಮುಂತಾದವರು ಹೋರಾಟದ ನೇತೃತ್ವ ವಹಿಸಿದ್ದರು.
ರೈಲ್ವೆ ಸರ್ಕಲ್ ಇನ್ಸ್‍ಪೆಕ್ಟರ್ ಟಿ.ಎಸ್.ನಾಯ್ಕ, ಪಿಎಸ್‍ಐ ಕೆ.ಸತೀಶ್‍ನಾಯ್ಕ, ರೈಲ್ವೆ ಸ್ಟೇಷನ್ ಮಾಸ್ಟರ್ ಎಂ.ಹನುಮಂತು ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ