ಮಧುಗಿರಿ
ಕೆಲ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಭಾವಿತ ವ್ಯಕ್ತಿಗಳು ಸೇರಿ ದಲಿತ ಕುಟುಂಬದವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿಗಳ ಮೂಲಕ ಶುಕ್ರವಾರ ದಲಿತಪರ ಸಂಘಟನೆಗಳು ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಕೊರಟಗೆರೆ ತಾಲ್ಲೂಕು ಸಿಎನ್ ದುರ್ಗ ಹೋಬಳಿ ಬುಕ್ಕಾಪಟ್ಟಣ ಸರ್ವೆ ನಂಬರ್ 207ರಲ್ಲಿನ 3 ಎಕರೆ 15 ಕುಂಟೆ ಜಮೀನು ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದ್ದು ಅಂದರೆ ಉಚ್ಚ ನ್ಯಾಯಾಲಯದ ಸಂಖ್ಯೆ ಡಬ್ಲೂಎ 908/2019 ಮತ್ತು ಕೊರಟಗೆರೆ ಸಿವಿಲ್ ನ್ಯಾಯಾಲಯದ ಸಂಖ್ಯೆ ಓಎಸ್161/2017 ಅನುಸೂಚಿತ ಜಾತಿ ವರ್ಗಗಳ ನ್ಯಾಯಾಲಯ ಲೋಕಾಯುಕ್ತ ನ್ಯಾಯಾಲಯದ ಬಿ.ಡಿ. 4040/2014 ಸಂಖ್ಯೆಯ ಪ್ರಕರಣ ಇನ್ನೂ ಬಾಕಿ ಇದೆ.
ದಲಿತ ಕುಟುಂಬದ ಸದಸ್ಯರುಗಳು ಸ್ವಾಧೀನಾನುಭವದಲ್ಲಿರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಅಧಿಕಾರಿಗಳು ಅವರಿಗೆ ಕೂಡಲೆ ಮನೆ ಮತ್ತು ಜಮೀನು ಬಿಟ್ಟುಕೊಡುವಂತೆ ಜೆಸಿಬಿಯಿಂದ ಮನೆಯನ್ನು ಉರುಳಿಸುತ್ತೇವೆ ಎಂದು ದೌರ್ಜನ್ಯ ಮಾಡುತ್ತಿರುವುದನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಪರಿಶಿಷ್ಟ ಜಾತಿಗೆ ಸೇರಿದ ಅಗ್ರಹಾರ ನಾಗರಾಜು ಮತ್ತು ಅವರ ಕುಟುಂಬದವರಿಗೆ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಕೊಡುತ್ತಿರುವ ಕಿರುಕುಳ ಸಹಿಸದೆ ದಯಾಮರಣಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಈ ಕುಟುಂಬಕ್ಕೆ ಏನಾದರೂ ಅನಾಹುತ ಆದರೆ ಜಿಲ್ಲಾಡಳಿತವೆ ನೇರಹೊಣೆ ಹೊರಬೇಕಾಗುತ್ತೆ. ಜಿಲ್ಲಾಧಿಕಾರಿಗಳು ಪ್ರಕರಣ ಇತ್ಯರ್ಥವಾಗುವವರೆಗೂ ಆ ನೊಂದ ದಲಿತ ಕುಟುಂಬಕ್ಕೆ ಜಮೀನಿನಲ್ಲೇ ವಾಸಿಸಲು ಅವಕಾಶ ಮಾಡಿಕೊಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದಲಿತಪರ ಸಂಘಟನೆಗಳು ಸೇರಿ ಕಾನೂನು ಹೋರಾಟ ನಡೆಸಲಾಗುವುದು. ನೊಂದ ಕುಟುಂಬದ ಮೇಲೆ ದೌರ್ಜನ್ಯ ವೆಸಗುತ್ತಿರುವ ಎಂ.ವಿಜಯ್ ಕೃಷ್ಣ ಹಾಗೂ ಅವರ ಸಹಚರರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
ತಾಲ್ಲೂಕುಗಳಲ್ಲಿ ಸರ್ಕಾರದಿಂದ ದಲಿತರಿಗೆ ಮಂಜೂರು ಆಗಿರುವ ಜಮೀನುಗಳನ್ನ ಹೆಚ್.ಮಹಾದೇವ್ ಹಾಗೂ ವಿಜಯಕೃಪ್ಣ ಅವರುಗಳು ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಕಾನೂನು ಬಾಹಿರವಾಗಿ, ಬಲವಂತದಿಂದ ಕೆಲ ಜಮೀನುಗಳನ್ನು ಕ್ರಯಕ್ಕೆ ಪಡೆದು ಅನೇಕ ಅಕ್ರಮಗಳನ್ನ ನಡೆಸಿರುತ್ತಾರೆ. ಇಂತಹ ಪ್ರಕರಣಗಳನ್ನು ಬಗ್ಗೆ ಸಂಪೂರ್ಣವಾಗಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಮೂಲ ಮಂಜೂರುದಾರರಿಗೆ ಜಮೀನುಗಳನ್ನು ಮರು ಮಂಜೂರು ಮಾಡಿಸಿಕೊಟ್ಟು ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿನಪ್ಪ, ತಾಲ್ಲೂಕು ಉಪಾಧ್ಯಕ್ಷ ಕಾಟಗೊಂಡನಹಳ್ಳಿ ಶಿವಣ್ಣ, ದಲಿತ ಮುಖಂಡರುಗಳಾದ ಮಹಾಲಿಂಗಪ್ಪ, ಹನುಮಂತರಾಯಪ್ಪ, ಮಂಜುನಾಥ, ಹನುಮಂತರಾಜು ವಿ.ಎನ್, ಮಾರಪ್ಪ, ಬೆಲ್ಲದಮಡುಗು ಶಿವಣ್ಣ ಹಾಗೂ ಮುಂತಾದವರು ಹಾಜರಿದ್ದರು.