ಹರಪನಹಳ್ಳಿ:
ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಾರತ ಕಮ್ಯುನಿಷ್ಟ ಪಕ್ಷದ ಅಭ್ಯರ್ಥಿ ಎಂ.ಶಿವಣ್ಣ ಅವರಿಗೆ ಚುನಾವಣಾ ಪ್ರಚಾರದ ವೇಳೆ ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ತಾಲ್ಲೂಕು ಸಿಪಿಐ ಘಟಕ ಆಗ್ರಹಿಸಿದೆ.
ಉಪವಿಭಾಗಾಧಿಕಾರಿ ಮಂಜುನಾಥಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಸಿಪಿಐ ಕಾರ್ಯಕರ್ತರು, ತುಮಕೂರು ಗ್ರಾಮಾಂತರ ತಾಲ್ಲೂಕಿನ ಉರ್ಡಿಗೆರೆ ಗ್ರಾಮದಲ್ಲಿ ಎಂ.ಶಿವಣ್ಣ ಅವರು ಪ್ರಚಾರ ನಡೆಸುತ್ತಿದ್ದಾಗ ಕೆಲವು ವ್ಯಕ್ತಿಗಳು ಏಕಾಏಕಿ ಬಂದು ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ `ಗೌಡರ ಬಗ್ಗೆ ನೀವು ಹಾಗೆ ಹೀಗೆ ಮಾತನಾಡಿದರೆ, ವಾಹನ ಸುಟ್ಟು ಹಾಕುತ್ತೇವೆ’ ಎಂದೂ ಜೀವ ಬೆದರಿಕೆ ಹಾಕಿದ್ದಾರೆ.
ಘಟನೆಯನ್ನು ಸಿಒಪಿಐ ಕಾರ್ಯಕರ್ತರೊಬ್ಬರು ಮೊಬೈಲ್ ನಲ್ಲಿ ದಾಖಲಿಸಿದ್ದಾರೆ. ಬೆದರಿಕೆ ಒಡ್ಡಿದ ವ್ಯಕ್ತಿಗಳು ಜೆಡಿಎಸ್ ಪಕ್ಷದ ನಾಯಕರ ಕುಮ್ಮಕ್ಕಿನಿಂದ ಹೀಗೆ ವರ್ತಿಸಿರಬಹುದು ಎಂಬ ಅನುಮಾನವಿದೆ. ಇಂತಹ ಘಟನೆಗಳು ಪ್ರಜಾತಂತ್ರವನ್ನು ಹತ್ತಿಕ್ಕುವ ಕೃತ್ಯಗಳೇ ಆಗಿವೆ. ಆದ್ದರಿಂದ ಚುನಾವಣೆ ಪ್ರಚಾರದಲ್ಲಿ ಅಥವಾ ರಾಜ್ಯದ ಯಾವುದೇ ಸ್ಥಳದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಆಯೋಗ ಎಚ್ಚರಿಕೆ ವಹಿಸಬೇಕು. ಸಿಪಿಐ ಅಭ್ಯರ್ಥಿಗೆ ಮತ್ತು ಚುನಾವಣಾ ಪ್ರಚಾರ ತಂಡಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹಕಾರ್ಯದರ್ಶಿ ಎಚ್.ಎಂ.ಸಂತೋಷ್, ಎಐಎಸ್‍ಎಫ್ ಮುಖಂಡರಾದ ರಮೇಶ್ ನಾಯ್ಕ, ಕೆ.ಬಸವರಾಜ್, ಸಿದ್ದೇಶ್, ಕೆ.ದಾದಾಪೀರ್, ಖಲಂದರ್ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
