ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಮನವಿ

ಮಧುಗಿರಿ

   ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರವರಿಗೆ ಮಧುಗಿರಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷ ವೆಂಕಟರಾಮ ಹಾಗೂ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

   ಪಾವಗಡ ತಾಲ್ಲೂಕಿನ ಅಚ್ಚಮ್ಮನಹಳ್ಳಿಯ ಗ್ರಾಮ ವಾಸ್ತವ್ಯ ಪ್ರಯುಕ್ತ ಪಟ್ಟಣದ ಡಿಡಿಪಿಐ ಕಚೇರಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಶಿಕ್ಷಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಶ್ರಮ ವಹಿಸುವುದಾಗಿ ತಿಳಿಸಿ, ಸುಮಾರು ದಶಕಗಳಿಂದ ಶಿಕ್ಷಕರ ನ್ಯಾಯಯುತವಾದ ಬೇಡಿಕೆಗಳು ಈಡೇರದೆ ನೆನಗುದಿಯಲ್ಲಿವೆ. ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

   ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರ್ತಿಸುವಾಗ ಹಿರಿಯ ಶಿಕ್ಷಕರನ್ನು ಗುರ್ತಿಸದೆ ಕಿರಿಯ ಶಿಕ್ಷಕರನ್ನು ಅನುದಾನಿತ ಶಾಲೆಯಂತೆ ಗುರ್ತಿಸಬೇಕು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಪಡೆದ ಶಿಕ್ಷಕರಿಗೆ 15 ರಿಂದ 30 ವರ್ಷಗಳ ಕಾಲಮಿತಿ ವೇತನ ಬಡ್ತಿ ನೀಡಬೇಕು.

   2004 ರಲ್ಲಿ ನೇರ ನೇಮಕಾತಿಯಲ್ಲಿ ಶಿಕ್ಷಕರಾದವರು ವರ್ಗಾವಣೆಯಲ್ಲಿ 2015ರಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ ಅನುಕೂಲವಾಗುತ್ತಿದೆ. ಪ್ರಾಥಮಿಕ ಶಾಲೆಯ ಸೇವಾ ಹಿರಿತನ ನೀಡುತ್ತಿರುವುದರಿಂದ ನೇರ ನೇಮಕಾತಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ತೊಂದರೆಯಾಗುತ್ತಿದೆ. ಕಾಲ್ಪನಿಕ ವೇತನ ಸೌಲಭ್ಯ ಸಮಸ್ಯೆ ಅನುದಾನಿತ ಶಾಲೆಯಲ್ಲಿನ ಜ್ವಲಂತ ಸಮಸ್ಯೆಯಾಗಿದ್ದು ತುರ್ತು ಅಂತ್ಯ ಕಾಣಬೇಕು.

    ಎನ್‍ಪಿಎಸ್ ರದ್ದು ಮಾಡಿ ಒಪಿಎಸ್ ಪದ್ಧತಿ ಜಾರಿಯಾಗಬೇಕು. 2008 ರ ನಂತರ ನೇಮಕವಾದ ಹಾಗೂ ಬಡ್ತಿ ಪಡೆದ ಶಿಕ್ಷಕರಿಗೆ ವಿಶೇಷ ಭತ್ಯೆ ನೀಡಬೇಕು. ಅನುದಾನಿತ ಶಾಲೆಗಳಿಗೆ ಸರ್ಕಾರಿ ಶಾಲೆಯಂತೆ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಬೇಕು ಹಾಗೂ ಶಿಕ್ಷಕರ ನೇಮಕಾತಿಗೆ ಆಡಳಿತ ಮಂಡಳಿಗೆ ಅನುಮತಿ ನೀಡಬೇಕು. ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಕೋರಿದ್ದಾರೆ.ಈ ಸಂದರ್ಭದಲ್ಲಿ ಡಿಡಿಪಿಐ ರವಿಶಂಕರ ರೆಡ್ಡಿ , ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಮಲ್ಲಿಕಾರ್ಜುನಯ್ಯ, ಹನುಮಂತರಾಯಪ್ಪ ಹಾಗೂ ಮತ್ತಿತರ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link