ಸಿಎಂ ಕುಟುಂಬಸ್ಥರ ವಿರುದ್ಧ ತನಿಖೆಗೆ ಕಾಂಗ್ರೆಸ್ ಆಗ್ರಹ…!

ಬೆಂಗಳೂರು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ಯಡಿಯೂರಪ್ಪನವರು ಈ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಈ ಬಾರಿ ಆರ್ ಟಿಜಿಎಸ್ ಮೂಲಕ ಪಡೆದಿದ್ದಾರೆ. ಇವರಿಗೆ ಭ್ರಷ್ಟಾಚಾರ ಮಾಡಲು ಎಷ್ಟು ಆತುರವಿದೆ ಎಂದರೆ ಬ್ಯಾಂಕ್ ವ್ಯವಹಾರದ ಮೂಲಕವೇ ಲಂಚ ಪಡೆಯುತ್ತಿದ್ದಾರೆ. ವಿಜಯೇಂದ್ರ ಅವರು ತಮಗೆ ಬಿಡಿಎ ಆಯುಕ್ತ ಹಣ ನೀಡಿಲ್ಲ ಎಂದು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯಲ್ಲೆಲ್ಲಾ ?ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ? ಎಂದು ಹೇಳುತ್ತಾರೆ.

   ಈ ಲಂಚದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯೇಂದ್ರ ಅವರನ್ನೇ ಮೋದಿ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಪಕ್ಷದ ಉಪಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ತೊಡಗಿರುವಾಗ, ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿದವರಿಗೆ ರಕ್ಷಣೆ ನೀಡಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಹರಿಹಾಯ್ದರು.
 

    ಈ ಪ್ರಕರಣ ತನಿಖೆಯಾಗುವವರೆಗೂ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೆಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ ಅವರನ್ನು ಈ ಸ್ಥಾನದಿಂದ ಕಿತ್ತುಹಾಕಬೇಕು. ಇದನ್ನು ಮಾಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಎಂಬುದು ಸಾಬೀತಾಗುತ್ತದೆ ಎಂದು ಟೀಕೆ ಮಾಡಿದರು.

    ಮಹಾತ್ಮ ಗಾಂಧೀಜಿ ಅವರ ಪ್ರಕಾರ ‘ದುರಾಡಳಿತ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಜಾಣ ಕಿವುಡುತನ ತೋರುತ್ತಿದೆ. ಈ ಹಿಂದೊಮ್ಮೆ ಬಿಜೆಪಿಯ ಸುದ್ದಿಗೋಷ್ಠಿಯಲ್ಲಿ ಎಲ್.ಕೆ ಆಡ್ವಾಣಿ ಅವರು ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಮಾಡಿದ ಆರೋಪ ಎಲ್ಲರಿಗೂ ಮತ್ತೆ ನೆನಪಿಗೆ ಬರುತ್ತಿದೆ. ಆಗ ಆಡ್ವಾಣಿ ಅವರು, ‘ಬಿಜೆಪಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪಕ್ಷದಿಂದ ಹೊರಹಾಕಿಲ್ಲ. ಅವರೇ ಪಕ್ಷ ಬಿಟ್ಟು ಹೋಗಿ, ಸ್ವಂತ ಕೆಜೆಪಿ ಪಕ್ಷ ಸ್ಥಾಪಿಸಿದ್ದಾರೆ. ಒಂದುವೇಳೆ ಬಿ.ಎಸ್ ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪಕ್ಷ ಕಠಿಣ ಕ್ರಮ ಕೈಗೊಂಡಿದ್ದಾರೆ ಪರಿಸ್ಥಿತಿ ಬೇರೆ ರೀತಿಯಲ್ಲಿರುತ್ತಿತ್ತು’ ಎಂದು ಹೇಳಿದ್ದರು.

    ಯಡಿಯೂರಪ್ಪ, ಅವರ ಪುತ್ರ, ಅವರ ಮೊಮ್ಮಗನ, ಅವರ ಅಳಿಯನ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪ ಇಡೀ ರಾಜ್ಯ ಹಾಗೂ ದೇಶಕ್ಕೆ ಆಘಾತ ತಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 666.22 ಕೋಟಿ ರೂಪಾಯಿ ಮೊತ್ತದ ಅಪಾರ್ಟ್ ಮೆಂಟ್ ನಿರ್ಮಾಣದ ಕಾಮಗಾರಿಯಲ್ಲಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ಲಂಚ ಪಡೆಜಿರುವ ಆರೋಪ ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ. ಈ ಆರೋಪದಲ್ಲಿ ಈ ಕಾಮಗಾರಿ ಗುತ್ತಿಗೆದಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಲಂಚ ನೀಡಿರುವ ಆರೋಪ ಇದೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ದೂರವಾಣಿ ಕರೆ ಆಡಿಯೋ ತುಣುಕು, ಕೋಟ್ಯಂತರ ರೂಪಾಯಿಗಳನ್ನು ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಹಾಗೂ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ವಾಟ್ಸಾಪ್ ಸಂದೇಶಗಳು, ಇವರ ಸಂದೇಶದಲ್ಲಿ  ಎಂದು ವಿಜಯೇಂದ್ರ ಅವರ ಹೆಸರು ಉಲ್ಲೇಖ, ಈ ಹಣವನ್ನು ಕೋಲ್ಕತಾ ಮೂಲದ ಏಳು ಶೆಲ್ ಕಂಪನಿಗಳು ಹಾಗೂ ಶಶಿಧರ್ ಅವರ ಬೆಂಗಳೂರಿನ ಕಂಪನಿಗೆ ಅಕ್ರಮವಾಗಿ ಹಣ ರವಾನೆ ಮಾಡಿರುವ ವಿವರವಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ಕಚೇರಿ ಹಾಗೂ ಗೃಹ ಕಚೇರಿ ಸಿಬ್ಬಂದಿ ಕೂಡ ಒಳಗೊಂಡಿರುವ ಮಾಹಿತಿ ಇದೆ ಎಂದು ಅವರು ತಿಳಿಸಿದರು.
ಈ ಎಲ್ಲ ಅಂಶಗಳು ಭ್ರಷ್ಟಾಚಾರದ ಆರೋಪ ನಿಜ ಎಂದು ಸಾರುತ್ತಿದ್ದು, ಯಡಿಯೂರಪ್ಪ ಅವರ ಗಮನಕ್ಕೆ ತರದೆ ಈ ಭ್ರಷ್ಟಾಚಾರದ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link