ಮಿಡಿಗೇಶಿ
ಕಳೆದ ನಾಲ್ಕಾರು ವರ್ಷಗಳಿಂದಲೂ ಮಳೆ ಬಾರದೆ, ಬೆಳೆ ಬೆಳೆಯದೆ ಹಕ್ಕಿಪಕ್ಷಿಗಳೂ ಸೇರಿದಂತೆ ಮೂಕ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಮಧುಗಿರಿ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆ-ಕಟ್ಟೆ, ಕುಂಟೆಗಳಲ್ಲಿ ಸಂಪೂರ್ಣ ನೀರು ಖಾಲಿಯಾಗಿದೆ.
ಮಳೆ ಬಾರದ ಕಾರಣದಿಂದ ಮುಕ್ಕಾಲು ಪಾಲು ರೈತಾಪಿ ವರ್ಗದವರ ತೆರೆದಬಾವಿ, ಕೊಳವೆ ಬಾವಿ ಗಳು ನೀರು ಬಾರದೆ ಬತ್ತಿ ಹೋಗಿವೆ. ಕೆಲವು ಕೊಳವೆ ಬಾವಿಗಳು ಇನ್ನೇನು ಹತ್ತು ಹದಿನೈದು ದಿನಗಳ ಅಂತರದಲ್ಲಿ ಬತ್ತಿ ಹೋಗುವ ಸ್ಥಿತಿಯತ್ತ ಸಾಗಿವೆಯಾದ್ದರಿಂದ ರೈತರ ಹೊಲ, ಗದ್ದೆಗಳು, ಅಡಕೆ, ತೆಂಗು, ಬಾಳೆ, ಇತರೆ ಹಣ್ಣಿನ ಬೆಳೆಗಳ ತೋಟಗಳು ಒಣಗುವ ಸ್ಥಿತಿಯಲ್ಲಿವೆ.
ಮನುಷ್ಯರಾದ ನಾವುಗಳು ಎಲ್ಲಿಯಾದರೂ ಆಹಾರ ಪದಾರ್ಥಗಳನ್ನು ತಂದು ಜೀವನ ಸಾಗಿಸುತ್ತೇವೆ. ಆದರೆ ದನಕರುಗಳಿಗೆ ಮೇಯಲು ಮೇವು ಒದಗಿಸುವುದು ದುಸ್ತರವಾಗಿದೆ. ಆದ ಕಾರಣ ಶಾಸಕ ಎಂ.ವಿ. ವೀಭದ್ರಯ್ಯನವರು, ಎಂ.ಎಲ್.ಸಿ. ಕಾಂತರಾಜು, ಸಂಸದ ಮುದ್ದಹನುಮೆಗೌಡರು ಹಾಗೂ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಎಲ್ಲಾ ಜನಪ್ರತಿನಿಧಿಗಳು ತಾಲ್ಲೂಕಿನಲ್ಲಿ ಶೀಘ್ರವಾಗಿ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕೆಂದು ಫೆ.21 ರ ಗುರುವಾರ ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ಮಿಡಿಗೇಶಿ ಕೆಪಿಟಿಸಿಎಲ್ ಕಚೆರಿ ಹಾಗೂ ಪಶು ವೈದ್ಯಕೀಯ ಆಸ್ಪತ್ರೆ ಮುಂಭಾಗದ ಹೆದ್ದಾರಿ ಬದಿ ತಮ್ಮ ದನ, ಕರು, ಎಮ್ಮೆ, ಎತ್ತುಗಳನ್ನು ಕಟ್ಟಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ರಸ್ತೆ ತಡೆ ಮಾಡುವುದಕ್ಕೆ ಮುಂಚೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಗೋಶಾಲೆ ಪ್ರಾರಂಭಿಸುವಂತೆ ಮನವಿ ಸಲ್ಲಿಸಿ ಎಂದು ತಿಳಿಸಿ ರೈತರ ಪ್ರತಿಭಟನೆ ತೆರವು ಗೊಳಿಸಿದರು.
ನಂತರ ಮಿಡಿಗೇಶಿ ಪಶು ವೈದ್ಯಾಧಿಕಾರಿ ಡಾ.ಗಿರೀಶ್‍ರೆಡ್ಡಿ ಪ್ರಜಾಪ್ರಗತಿಯೊಂದಿಗೆ ಮಾತನಾಡಿ, ಈಗಾಗಲೆ ಶಾಸಕ ಎಂ.ವಿ ವೀರಭದ್ರಯ್ಯನವರು ತಾಲ್ಲೂಕಿನಲ್ಲಿ ತೀವ್ರ ಮೇವಿನ ಕೊರತೆಯಿರುವ ಕೊಡಿಗೇನಹಳ್ಳಿ ಹಾಗೂ ದೊಡ್ಡೇರಿ ಹೋಬಳಿಗಳಲ್ಲಿ ಮೇವಿನ ಬ್ಯಾಂಕ್ ತೆರೆಯಲು ಚಾಲನೆ ನೀಡಿದ್ದಾರೆ.
ಟೆಂಡರ್ ಸಹ ಮುಗಿದಿದೆ. ಮೇವು ಬರಬೇಕಾಗಿರುತ್ತದೆ. ದನ ಒಂದಕ್ಕೆ ಪ್ರತಿ ದಿನ 5 ಕೆ.ಜಿ ಮೇವು ನೀಡಲು, ಮೇವು ಕೆ.ಜಿ. ಒಂದಕ್ಕೆ 2 ರೂ ದರ ನಿಗದಿಪಡಿಸಲಾಗಿದೆ. ಕೊಡಿಗೇನಹಳ್ಳಿ ಹೋಬಳಿಯ ಮೇವು ಬ್ಯಾಂಕ್‍ನಿಂದ ಐ.ಡಿ.ಹಳ್ಳಿ, ಪುರವರ, ಕೊಡಿಗೇನಹಳ್ಳಿ ರೈತರಿಗೆ ಹಾಗೂ ದೊಡ್ಡೇರಿ ಹೋಬಳಿಯ ಮೇವು ಬ್ಯಾಂಕಿನಿಂದ ಕಸಬಾ, ಮಿಡಿಗೇಶಿ ಹಾಗೂ ದೊಡ್ಡೇರಿ ಹೋಬಳಿ ರೈತರುಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲು ಶಾಸಕರು ಹಾಗೂ ತಹಸೀಲ್ದಾರ್ ಹಂತದಲ್ಲಿ ಮಾತುಕತೆ ನಡೆದಿದೆ. ಆದಷ್ಟು ಬೇಗ ಮೇವಿನ ಬ್ಯಾಂಕ್ ತೆರೆಯಲಾಗುವುದು. ಅಗತ್ಯ ಬಿದ್ದರೆ ಮತ್ತೆರಡು ಮೇವಿನ ಬ್ಯಾಂಕ್ ತೆರೆಯಲು ಶಾಸಕರ, ಜಿಲ್ಲಾಧಿಕಾರಿಗಳವರ ಅನುಮೋದನೆ ಪಡೆದು ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.