ದಾವಣಗೆರೆ

ಕೊರಚ-ಕೊರಮ, ಲಂಬಾಣಿ ಹಾಗೂಭೋವಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವವರವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಪತ್ರ ಚಳವಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.
ನಗರದ ಗಡಿಯಾರ ಕಂಬ ಸಮೀಪದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗದ ಮುಖಂಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೋವಿ ಸಮಾಜದ ಹಿರಿಯ ಮುಖಂಡ, ಕೆಪಿಸಿಸ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ, ಅತ್ಯಂತಕಡು ಬಡತನದಲ್ಲಿರುವ, ಅಸಂಘಟಿತವಾದ ಭೋವಿ, ಲಂಬಾಣಿ, ಕೊರಚ, ಕೊರಮ ಸಮಾಜಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ನೀಡಿದ್ದರು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಯೆಂಬುದಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅಂತಹವರ ವಿರುದ್ಧ ಸರ್ಕಾರಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರಿಂದ, ಸ್ವಾತಂತ್ರ್ಯ ನಂತರ ಬಾಬಾ ಸಾಹೇಬ್ ಅಂಬೇಡ್ಕರ್‍ರಿಂದ ಮೀಸಲಾತಿ ಪಡೆದ ಭೋವಿ, ಲಂಬಾಣಿ, ಕೊರಚ, ಕೊರಮ ಸಮಾಜಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲು ಸತತವಾಗಿ ಹುನ್ನಾರ ನಡೆಯುತ್ತಿದೆ. ಹೀಗೆ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮಜರುಗಿಸಲು ಅವರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಯಲ್ಲಿರುವ ಭೋವಿ, ಲಂಬಾಣಿ, ಕೊರಚ, ಕೊರಮ ಸಮಾಜಗಳ ಹಿತರಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕು.ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಚ, ಕೊರಮ ಸಮಾಜಗಳನ್ನು ಕೈಬಿಟ್ಟಿರುವುದಾಗಿ ಸುದ್ದಿ ಹರಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಂಚೆ ಪತ್ರ ಚಳವಳಿಯಲ್ಲಿ ಭೋವಿ ಸಮಾಜದ ಮುಖಂಡರಾದ ಎಚ್.ಚಂದ್ರಪ್ಪ, ಡಿ.ದೇವರಾಜ, ಆರ್.ಶ್ರೀನಿವಾಸ, ತಿಪ್ಪೇಶ, ಉಮೇಶ್, ಆರ್.ಸುರೇಶ, ವೈ.ತಿಮ್ಮೇಶ, ಎಂ.ಅಶೋಕ, ವೈ.ನಾರಾಯಣ, ಗೊಲ್ಲರಹಳ್ಳಿ ಶಾಂತರಾಜ, ಎಚ್.ನಾಗರಾಜ, ಗಿರಿಧರ್, ಸೋಮಶೇಖರ, ಈ.ರುದ್ರೇಶ, ಡಿ.ಕೇಶವಮೂರ್ತಿ, ಎಚ್.ಜಯಣ್ಣ ಇತರರು ಇದ್ದರು. ಇದೇ ವೇಳೆ ತಮ್ಮ ಮನವಿಯನ್ನು ಅಂಚೆ ಪತ್ರದಲ್ಲಿ ಬರೆಯುವ ಮೂಲಕ ಅಂಚೆ ಪೆಟ್ಟಿಗೆಗೆ ಹಾಕಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
