ಶಿರಾ:
ರಾಜ್ಯ ಸರ್ಕಾರ ಬಹು ಕೋಟಿ ರೂಗಳ ವೆಚ್ಚದಲ್ಲಿ ಶಿರಾ ನಗರದಲ್ಲಿ ನಿರ್ಮಾಣಗೊಂಡ ತಾಯಿ-ಮಗು ಆಸ್ಪತ್ರೆ, ಪಶು ಕ್ಲಿನಿಕ್ ಹಾಗೂ ಮಿನಿ ವಿಧಾನಸೌಧದ ಉದ್ಘಾಟನೆಯಾಗದೆ ನೆನೆಗುದಿಗೆ ಬಿದ್ದಿದ್ದು ಈ ಕೂಡಲೇ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಜೆ.ಡಿ.ಯು. ಪಕ್ಷದ ಯುವ ಪ್ರಧಾನ ಕಾರ್ಯದರ್ಶಿ ಹಾಗೂ ಸದರಿ ಪಕ್ಷದ ಮಾಧ್ಯಮ ಮುಖ್ಯಸ್ಥ ಲಿಂಗದಹಳ್ಳಿ ಚೇತನ್‍ಕುಮಾರ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರನ್ನು ಭೇಟಿ ಮಾಡಿರುವ ಅವರು ಶಿರಾ ಭಾಗವು ಅತ್ಯಂತ ಹಿಂದುಳಿದ ಪ್ರದೇಶವಷ್ಟೇ ಅಲ್ಲದೆ ಬರದ ದವಡೆಗೆ ಸಿಲುಕಿ ರೈತರು ಹಾಗೂ ಸಾರ್ವಜನಿಕರು ಸಾಕಷ್ಟು ನೊಂದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡದೆ ಸರ್ಕಾರ ಕೈಚೆಲ್ಲಿ ಕೂತಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಹು ಕೋಟಿ ರೂಗಳ ವೆಚ್ಚದಲ್ಲಿ ಮಿನಿ ವಿಧಾನಸೌಧ, ಪಶು ಕ್ಲಿನಿಕ್ ಹಾಗೂ ತಾಯಿ-ಮಗು ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಉರುಳಿದರೂ ಉದ್ಘಾಟನೆಯಾಗಿಯೇ ಇಲ್ಲ.
ರಾಜಕೀಯ ಕೆಸರೆಚಾಟದಿಂದಾಗಿ ಈ ಕಾಮಗಾರಿಗಳ ಉದ್ಘಾಟನೆ ನೆನೆಗುದಿಗೆ ಬಿದ್ದಿರುವುದು ವಿಪರ್ಯಾಸವಾಗಿದ್ದು ಸರ್ಕಾರ ಕೂಡಲೇ ಇವುಗಳನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಲಿಂಗದಹಳ್ಳಿ ಚೇತನ್‍ಕುಮಾರ್ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ