ಶಿರಾ
ತಾಲ್ಲೂಕಿನ ಕಳ್ಳಂಬೆಳ್ಳ, ಶಿರಾ, ಮದಲೂರು ಸೇರಿದಂತೆ ಅನೇಕ ಕೆರೆಗಳಲ್ಲಿ ಒಂದು ಹನಿ ನೀರಿಲ್ಲದೆ ಜನ ಜಾನುವಾರುಗಳು ಪರಿತಪಿಸುವಂತಹ ಸ್ಥಿತಿ ಉಂಟಾಗಿದ್ದು ಈ ಕೂಡಲೇ ಹೇಮಾವತಿಯ ನೀರನ್ನು ಹರಿಸುವಂತೆ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯು ತಾಲ್ಲೂಕು ದಂಡಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿತು.
ತಾಲ್ಲೂಕಿನ ಶಿರಾ ಕೆರೆಯಲ್ಲಿ ಹೇಮಾವತಿಯ ನೀರು ಸಂಪೂರ್ಣವಾಗಿ ಖಾಲಿಯಾಗುತ್ತಲಿದ್ದು ನಗರದ ಜನತೆಗೆ 18-20 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ನಗರದ ಕೆಲವೆಡೆಯಂತೂ ತಿಂಗಳಾದರೂ ನೀರು ಲಭ್ಯವಾಗುತ್ತಿಲ್ಲ. ಮದಲೂರು ಕೆರೆ ಹಾಗೂ ಕಳ್ಳಂಬೆಳ್ಳ ಕೆರೆಗಳಂತೂ ಸಂಪೂರ್ಣ ಖಾಲಿಯಾಗಿ ಒಣಗಿ ಹೋಗಿವೆ ಎಂದು ಹೋರಾಟ ಸಮಿತಿ ತನ್ನ ಮನವಿ ಪತ್ರದಲ್ಲಿ ತಿಳಿಸಿದೆ.
ಶಿರಾ ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆ ಬಂದಿದ್ದರೂ ಕೆರೆಗಳಿಗೆ ನೀರು ತುಂಬುವಂತಹ ಮಳೆಯೇ ಬಂದಿಲ್ಲ. ಯಾವುದೇ ಕೆರೆಗಳಲ್ಲಿ ಒಂದು ಹನಿ ನೀರು ಕೂಡಾ ಇಲ್ಲ. ಈ ಕೂಡಲೇ ಸರ್ಕಾರ ಗೋರೂರು ಜಲಾಶಯದಿಂದ ತುಮಕೂರು ನಾಲೆಗೆ ನೀರು ಹರಿಸಲು ಆರಂಭಿಸಿದ್ದು ಮೊದಲಿಗೆ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳಿಗೆ ನೀರು ಹರಿಸಿ ನಂತರ ಮುಂದಿನ ಕೆರೆಗಳಿಗೆ ಹರಿಸುವಂತೆ ಹೋರಾಟ ಸಮಿತಿಯು ಮನವಿ ಮಾಡಿದೆ.
ಹೇಮಾವತಿ ನೀರನ್ನು ಮೊದಲಿಗೆ ಶಿರಾ, ಕಳ್ಳಂಬೆಳ್ಳ ಹಾಗೂ ಮದಲೂರು ಕೆರೆಗಳಿಗೆ ಹರಿಸುವಂತೆ ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ನಾಹಿದಾ ಜಮ್ ಜಮ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಬಿ.ರಮೇಶ್, ಉಪಾಧ್ಯಕ್ಷ ಜಿ.ಎನ್.ತಾರೇಗೌಡ, ಟೈರ್ ರಂಗನಾಥ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
