ಬಾವಲಿ ಆವಾಸದ ಮರ ಉಳಿಸುವ ಭರವಸೆ

ಗುಬ್ಬಿ

      ಸಾವಿರಾರು ಬಾವಲಿ ಹಕ್ಕಿಗಳ ವಾಸಸ್ಥಾನವಾದ ಎರಡು ಮರವನ್ನು ಕಡಿಯದಂತೆ ಆದೇಶ ಮಾಡಲಾಗಿತ್ತು. ಆದರೆ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಮರದ ಕೊಂಬೆಗಳನ್ನು ಕಡಿದಿರುವ ಕ್ರಮ ಸರಿಯಲ್ಲ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಆರೋಪಿಸಿದರು.

    ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಗೇಟ್ ಬಳಿ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಮುಖಂಡರು ಮರದ ಬುಡದಲ್ಲೇ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದಾಗ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಬಾವಲಿಹಕ್ಕಿಗಳು ವಾಸವಿದ್ದ ಸಾಂಪ್ರದಾಯಿಕ ತಳಿಯ ದೊಡ್ಡ ಆಲದಮರ ಹಾಗೂ ಹಿಪ್ಪೇಮರವು ಹೆದ್ದಾರಿ ಅಗಲೀರಣಕ್ಕೆ ಒಳಪಟ್ಟಿವೆ. ಚತುಷ್ಪಥ ರಸ್ತೆ ನಿರ್ಮಾಣದ ನಡು ಮಧ್ಯೆ ಬರುವ ಈ ಎರಡು ಮರಗಳು ಕಡಿಯಲು ಎರಡು ವರ್ಷಗಳ ಹಿಂದೆ ಅಡ್ಡಿಪಡಿಸಿದ್ದ ಸ್ಥಳೀಯರು ಈ ಮರಗಳನ್ನು ಉಳಿಸಿಕೊಡಲು ಮನವಿ ಮಾಡಿದ್ದರು.

     ಹೀರೇಹಕ್ಕಿ ಮರಗಳು ದೇವರಿಗೆ ಸಮಾನ ಎಂದು ನಂಬಿರುವ ಇಲ್ಲಿನ ಗ್ರಾಮಸ್ಥರು ಮರಗಳಿಗೆ ಪೂಜೆ ಪುರಸ್ಕಾರ ಮಾಡಿದ್ದ ನಿದರ್ಶನವಿದೆ. ಇಂತಹ ಮರಗಳು ಸುಮಾರು 5 ಸಾವಿರ ಬಾವಲಿ ಹಕ್ಕಿಗಳಿಗೆ ವಾಸಸ್ಥಳವಾಗಿವೆ. ಮನವಿ ಪುರಸ್ಕರಿಸಿದ ಅರಣ್ಯ ಇಲಾಖೆ ಮರಗಳನ್ನು ಉಳಿಸುವ ಭರವಸೆ ನೀಡಿ ಆದೇಶವನ್ನು ಹೊರಡಿಸಿತ್ತು. ಆದರೆ ಈ ಆದೇಶವನ್ನೇ ಉಲ್ಲಂಘನೆ ಮಾಡಿದ ಹೆದ್ದಾರಿ ಗುತ್ತಿಗೆದಾರರು ತಡರಾತ್ರಿ ಮರಗಳನ್ನು ಕಡಿಯಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

   ಮಲ್ಲಸಂದ್ರದಿಂದ ಅರಸೀಕೆರೆ ಮಾರ್ಗವನ್ನು ಅಗಲೀಕರಣ ಮಾಡಿ ನಾಲ್ಕು ಪಥ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿನ 6,535 ಮರಗಳನ್ನು ಕಡಿಯಲು ಅನುಮತಿ ನೀಡಿದ ಅರಣ್ಯ ಇಲಾಖೆ ಬಾವಲಿ ಪಕ್ಷಿಗಳಿರುವ ಮರದ ಸಂಖ್ಯೆ 564 ಮತ್ತು 566 ಎರಡು ಮರಗಳನ್ನು ಉಳಿಸಿ ಮಿಕ್ಕ ಮರಗಳನ್ನು ಕಡಿಯಲು ಆದೇಶ ನೀಡಿದ್ದಾರೆ. ಈ ಆದೇಶವನ್ನೇ ಉಲ್ಲಂಘಿಸಿದ ಗುತ್ತಿಗೆದಾರರು ರಾತ್ರಿ ವೇಳೆ ಆಧುನಿಕ ಯಂತ್ರ ಬಳಸಿ ಕಟಾವು ಮಾಡಲು ಮುಂದಾಗಿ ಆಲದ ಮರಗಳ ಎರಡು ಕೊಂಬೆಗಳನ್ನು ಧರೆಗುರುಳಿಸಿದ್ದಾರೆ.

   ರಾತ್ರಿ ವೇಳೆ ಆಹಾರ ಹುಡುಕಿ ಹೊರಟು ಮರಳಿ ತನ್ನ ಸ್ಥಾನಕ್ಕೆ ಬಂದ ಬಾವಲಿ ಹಕ್ಕಿಗಳ ಹಿಂಡು ಹಗಲಿನಲ್ಲಿ ಆಕಾಶದಲ್ಲಿ ಸುತ್ತುತ್ತಾ ಪರದಾಡಿದ್ದು ಸ್ಥಳೀಯರಲ್ಲಿ ಆಕ್ರೋಶ ತಂದಿದೆ. ಅಪರೂಪದ ಹಕ್ಕಿಗಳ ಸಂತತಿ ನಾಶ ಮಾಡಲು ಮುಂದಾದ ಗುತ್ತಿಗೆದಾರರ ವಿರುದ್ದ ಕೇಸು ದಾಖಲಿಸಬೇಕು. ಈ ಎರಡು ಮರಗಳನ್ನು ಉಳಿಸಿ ರಸ್ತೆ ಅಗಲೀಕರಣ ಮಾಡಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಆಗ್ರಹಿಸಿದರು.

    ಮರಗಳ ಮಾರಣಹೋಮ ಮಾಡುವಲ್ಲಿ ಆತುರರಾಗುವ ಹೆದ್ದಾರಿ ರಸ್ತೆ ಗುತ್ತಿಗೆದಾರರು ಕ್ಷಣಾರ್ಧದಲ್ಲಿ ಮರಗಳನ್ನು ಧರೆಗುರುಳಿಸುತ್ತಾರೆ. ಆದರೆ ಅದರ ನೂರಾರು ವರ್ಷಗಳ ಇತಿಹಾಸ ಗುರುತು ಸಿಗದಂತೆ ಮಾಡುವ ಅಭಿವೃದ್ದಿ ಕೆಲಸದಿಂದ ಪರಿಸರ ನಾಶವಾಗಲಿದೆ. ಇಡೀ ತಾಲ್ಲೂಕಿನಲ್ಲಿ ಅಪರೂಪದ ಬಾವಲಿ ಹಕ್ಕಿಗಳ ಸಂತತಿ ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಇರುವ ಮರಗಳನ್ನು ಉಳಿಸುವಲ್ಲಿ ಅರಣ್ಯ ಇಲಾಖೆ ಸೂಕ್ತವಾದ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎನಿಸಿದೆ. ಸೋಪನಹಳ್ಳಿ ಮರಗಳೆಂದರೆ ಬಾವಲಿಗಳ ಮರ ಎಂದೇ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದೆ. ಅಂತಹ ಮರದ ಒಂದು ಭಾಗವನ್ನು ಸಲ್ಲದ ಕಾರಣ ನೀಡಿ ಕಡಿದಿರುವ ಗುತ್ತಿಗೆದಾರರ ವಿರುದ್ದ ಕ್ರಮ ವಹಿಸುವ ಜತೆಗೆ ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಜಿಲ್ಲಾ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಟಿ.ಭೈರಪ್ಪ ಒತ್ತಾಯಿಸಿದರು.

      ಮರದ ಬುಡದಲ್ಲಿ ಎರಡು ತಾಸು ಧರಣಿ ನಡೆಸಿದ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ರವಿ, ಪಿಎಸ್‍ಐ ಜ್ಞಾನಮೂರ್ತಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಅಮೃತ್ ಧರಣಿ ನಿರತ ಪರಿಸರ ಪ್ರೇಮಿಗಳೊಂದಿಗೆ ಚರ್ಚಿಸಿದರು. ನೂರಾರು ವರ್ಷಗಳ ಇತಿಹಾಸದ ಈ ಎರಡು ಬೃಹತ್‍ಮರಗಳು ಅಪರೂಪದ ಪಕ್ಷಿ ಸಂಕುಲ ಬಾವಲಿ ಹಕ್ಕಿಗಳನ್ನು ಸಾಕಿ ಸಲಹಿವೆ. ಇಂತಹ ಮರಗಳನ್ನು ಕಡಿಯದಂತೆ ಉಳಿಸಿ ರಸ್ತೆ ಕೆಲಸ ಮಾಡಲು ಮೇಲಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಮನದಟ್ಟು ಮಾಡುವ ಭರವಸೆ ಹಾಗೂ ಏಕಾಏಕಿ ಮರದ ಕೊಂಬೆ ಕಡಿದ ಪ್ರಕರಣ ದಾಖಲು ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದರಾಮಯ್ಯ, ಯತೀಶ್‍ಕುಮಾರ್, ಉಮೇಶ್, ಕೆ.ಆರ್.ಗುರು, ನಂದೀಶ್, ರಮೇಶ್, ಗುರುಚನ್ನಬಸವಯ್ಯ, ಸಾಗರನಹಳ್ಳಿ ಜಗದೀಶ್, ಚನ್ನನಂಜಪ್ಪ, ಜಗದೀಶ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link