ಬೆಂಬಲ ಬೆಲೆ ಯೋಜನೆ ಅನುಷ್ಟಾನಕ್ಕೆ ಪ್ರಸ್ತಾವನೆ

ದಾವಣಗೆರೆ:

     ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನಗಳಾದ ಮೆಕ್ಕೆಜೋಳ, ಭತ್ತ, ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

     ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸುವ ಕುರಿತು ಚರ್ಚಿಸಲು ಅಪರ ಜಿಲ್ಲಾಧಿಕಾರಿ ನಜ್ಮಾ ಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

      ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ, 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರವು ಕೆಲವು ಪ್ರಮುಖ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿರುತ್ತದೆ. ಪ್ರಸ್ತುತ್ತ 2019ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಸಗಟು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಸಂಧರ್ಭದಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತ ಮತ್ತು ರಾಗಿಯನ್ನು ಖರೀದಿಸಿ ರೈತರಿಗೆ ಅನುಕೂಲ ಒದಗಿಸುವ ಹಿನ್ನೆಲೆಯಲ್ಲಿ ಈ ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯುವ ಅವಶ್ಯಕತೆ ಇರುತ್ತದೆ ಎಂದರು.

      ಸರ್ಕಾರಕ್ಕೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಮತ್ತು ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಖರೀದಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸುವುದು ಸೂಕ್ತವಾಗಿದೆ ಹಾಗೂ ಈ ಯೋಜನೆ ಅನುಷ್ಟಾನದಿಂದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ಸ್ಥಿರತೆ ಕಾಪಾಡಲು ಸಹಾಯಕವಾಗುತ್ತದೆ ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆ ದರಗಳ ಬಗ್ಗೆ ರೈತರಲ್ಲಿ ಅರಿವು ಮೂಡುತ್ತದೆ ಎಂದರು.

     ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ, ಜಗಳೂರು ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರ ಹಾಗೂ ಜಗಳೂರು ಮತ್ತು ದಾವಣಗೆರೆ ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವ ಅವಶ್ಯಕತೆ ಇದೆ ಎಂದರು.

    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಭು ಮಾತನಾಡಿ, ಮಾರುಕಟ್ಟೆಯಲ್ಲಿ ಪ್ರಸ್ತುತ ಮೆಕ್ಕೆಜೋಳ ಸರಾಸರಿ ದರ 1800 ರಿಂದ 1900 ಇದೆ. ಸದ್ಯಕ್ಕೆ ಬೇರೆ ರಾಜ್ಯಗಳಿಂದ ಮೆಕ್ಕೆಜೋಳ ಬರುತ್ತಿಲ್ಲ. ಫೆಬ್ರವರಿ ನಂತರ ಹೊರಗಡೆಯಿಂದ ಮೆಕ್ಕೆಜೋಳ ಬರಲಿದೆ. ನಮ್ಮ ಮೆಕ್ಕೆಜೋಳದಲ್ಲಿ ತೇವಾಂಶ ಹೆಚ್ಚಿರುವುದರಿಂದ ಹೊರಗಡೆ ಉತ್ತಮ ಮಾರುಕಟ್ಟೆ ಸಿಗುವುದಿಲ್ಲ. ಒಣಗಿಸಿದ ಮೆಕ್ಕೆಜೋಳಕ್ಕೆ ಬೇಡಿಕೆ ಮತ್ತು ಮಾರುಕಟ್ಟೆ ಲಭಿಸುತ್ತದೆ. ಹಾಗೂ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಉತ್ತಮ ದರ ಸಿಗಲಿದೆ ಎಂದರು.

     ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸ್ಥಿರತೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಾರುಕಟ್ಟೆ ಕುರಿತು ಅವರಲ್ಲಿ ಅರಿವು ಮೂಡಿಸುವಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆ ಅನುಷ್ಟಾನ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಕನಿಷ್ಟ ಬೆಂಬಲ ಬೆಲೆ ಯೋಜನೆ ಅನುಷ್ಟಾನಕ್ಕಾಗಿ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಖರೀದಿ ಕೇಂದ್ರ ತೆರೆಯಲು ಅವಶ್ಯವಾದ ಎಲ್ಲ ಸಿದ್ದತೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಸಭೆಯಲ್ಲಿ ಕೆಎಫ್‍ಸಿಎಸ್‍ಸಿ ಯ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ, ಆಹಾರ ಇಲಾಖೆ ವ್ಯವಸ್ಥಾಪಕಿ ಸುಕನ್ಯಾ, ಎಲ್ಲ ತಾಲ್ಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link