ತಿಪಟೂರು
ತಾಲ್ಲೂಕಿನ ಅತಿಹೆಚ್ಚು ಬರಗಾಲ ಪೀಡಿತ ಪ್ರದೇಶವಾದ ಹೊನ್ನವಳ್ಳಿ ಭಾಗದ ಏತನೀರಾವರಿಗೆ ಒಳಪಡುವ ಕೆರೆಗಳನ್ನು ಹೇಮಾವತಿ ನಾಲೆಯ ನೀರನ್ನು ಬಳಸಿಕೊಂಡು ತಾಲ್ಲೂಕು ಆಡಳಿತ ತಕ್ಷಣ ತುಂಬಿಸಬೇಕೆಂದು ಜೆ.ಡಿ.ಎಸ್ ಮುಖಂಡ ಲೋಕೇಶ್ವರ್ ಆಗ್ರಹಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜಲಾಶಯಗಳು ಉತ್ತಮ ಮಳೆಯಿಂದ ತುಂಬಿತುಳುಕುತ್ತಿವೆ.
ತಾಲ್ಲೂಕಿಗೆ ಹೇಮಾವತಿ ನೀರು ಹರಿದು ಬಂದರು ಶಾಸಕರು ಕೆರೆ ತುಂಬಿಸಲು ವಿದ್ಯುತ್‍ಬಿಲ್ ಸರಿದೂಗಿಸುವ ನೆಪವೊಡ್ಡಿ ಪಂಪ್‍ಸೆಟ್ ಮೋಟಾರ್‍ಗಳನ್ನು ಸರಿಯಾಗಿ ಬಳಸದೆ ಮತ್ತು ಮೋಟಾರ್‍ಗಳ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡದೆ ಹರಿಯುವ ನೀರನ್ನು ತನ್ನಷ್ಟಕ್ಕೆ ಹರಿಯಬಿಟ್ಟು ಕೆರೆಗಳನ್ನು ತುಂಬಿಸುವಲ್ಲಿ ವಿಫಲವಾಗಿದ್ದಾರೆ. ಕೇವಲ 4-5 ದಿನಮಾತ್ರ ಕೆರೆಗಳಿಗೆ ನೀರನ್ನು ಬಿಟ್ಟು ಹಳ್ಳಿಯ ಜನರನ್ನು ಮೆಚ್ಚಿಸಲು ಹೊರಟಿದ್ದು ಈ ಧೋರಣೆಯನ್ನು ತಾವು ಖಂಡಿಸುವುದಾಗಿ ಹೇಳಿದ ಅವರು. ಜೆ.ಡಿ.ಎಸ್ ನಿಯೋಗದ ವತಿಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಡಿಸೆಂಬರ್‍ವರೆಗೆ ತಾಲ್ಲೂಕಿಗೆ ಹೇಮಾವತಿ ನಾಲೆಯಲ್ಲಿ ನೀರನ್ನು ಹರಿಸುವಂತೆ ಮನವಿಮಾಡಿದಾಗ ಮುಖ್ಯಮಂತ್ರಿಗಳು ಒಪ್ಪಿದ್ದು ಅದರಂತೆ ನಡೆದಿದ್ದು, ಇದನ್ನು ತಾಲ್ಲೂಕು ಆಡಳಿತ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದರು.
ನಗರದ ಕಲ್ಪತರು ಕ್ರೀಡಾಂಗಣವು ಮಳೆನೀರಿಗೆ ಕೆರೆಯಂತಾಗಿದ್ದು ಕಳೆಪೆ ಕಾಮಗಾರಿಯಿಂದ ಕೆಲವು ಕಡೆ ಕಲ್ಲುಹಾಸು ಕುಸಿದಿದ್ದು ಮತ್ತು ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ನೀರು ಹೊರಹೋಗದಂತಾಗಿ ಮಳೆ ಬಂದರೆ ಕೆರೆಯಂತಾಗುತ್ತಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ 15 ಲಕ್ಷ ರೂ. ನಿರ್ವಹಣಾ ವೆಚ್ಚದಲ್ಲಿ ಟೆಂಡರ್ ಕರೆದಿದ್ದರೂ ಕೂಡ ಶಾಸಕರು ತಡೆಯೊಡ್ಡಿ ದುರಸ್ಥಿಯಾಗಲು ಬಿಡುತ್ತಿಲ್ಲ ಎಂಬ ಮಾಹಿತಿಯಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಕ್ರೀಡಾಂಗಣವನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದರು.
ನಗರದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ನಗರದಲ್ಲಿ ಪೊಲೀಸ್ ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇಲ್ಲಿನ ಎಸ್.ಐ ವರ್ಗಾವಣೆಯಾಗಿರುವ ಈ ಸಂದರ್ಭದಲ್ಲಿ ಇಲ್ಲಿ ಗ್ರಾಮಾಂತರ ಇನ್ಸ್‍ಪೆಕ್ಟರ್‍ಗೆ ಅಧಿಕಾರವನ್ನು ಹಸ್ತಾಂತರಿಸದೆ ಗುಬ್ಬಿಯ ಇನ್ಸ್‍ಪೆಕ್ಟರ್‍ಗೆ ಹಸ್ತಾಂತರಿಸಿರುವುದು ಸ್ವತಃ ಪೋಲೀಸ್ ಅಧಿಕಾರಿಯಾಗಿದ್ದ ನನಗೆ ಆಶ್ಚರ್ಯವನ್ನುಂಟುಮಾಡುತ್ತಿದೆ. ಅದೂ ಅಲ್ಲದೆ ಗುಬ್ಬಿಯ ಎಸ್.ಎಸ್ ತುಮಕೂರು ಗ್ರಾಮಾಂತರ ಡಿ.ವೈ.ಎಸ್.ಪಿ ವೃತ್ತಕ್ಕೆ ಬರುತ್ತದೆ. ಅದನ್ನು ಬಿಟ್ಟು ತಿಪಟೂರು ಡಿ.ವೈ.ಎಸ್.ಪಿ ವೃತ್ತಕ್ಕೆ ಸಂಬಂಧಿಸಿದ ಎಸ್.ಐಗೆ ಅಧಿಕಾರವನ್ನು ಹಸ್ತಾಂತರಿಸದೆ ಇರುವುದು ಎಸ್.ಪಿಯವರ ತಪ್ಪುನಿರ್ಧಾರವೆಂದರು ಮತ್ತು ಶೀಘ್ರವಾಗಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಅಪರಾಧ ಕೃತ್ಯಗಳನ್ನು ತಡೆಯಬೇಕಾಗಿ ಆಗ್ರಹಿಸಿದರು.
ನಗರದಲ್ಲಿ ಸರಗಳ್ಳತನ ಮನೆಗಳ್ಳತನ ಹೆಚ್ಚಾಗಿದ್ದು ಅಪರಾಧ ಚಟುವಟಿಕಗಳಲ್ಲಿ ರೌಡಿಶೀಟರ್‍ಗಳು ಭಾಗಿಯಾಗಿ ಅನೇಕ ಅಪರಾಧ ಕೃತ್ಯಗಳು ನಡೆದರು ಕೂಡ ಜಿಲ್ಲಾ ಎಸ್.ಪಿಯವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸುತ್ತಿಲ್ಲ. ಮಾನ್ಯ ಗೃಹಸಚಿವರು ಈ ಬಗ್ಗೆ ಎಸ್.ಪಿ ಯವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದರು.
ಅರಸು ನಗರದಲ್ಲಿ ಹೆಚ್ಚು ಬಡವರು ವಾಸಿಸುತ್ತಿದ್ದು ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯರು ಜಾಗಬಿಟ್ಟುಕೊಡಲು ತಯಾರಾಗಿದ್ದರೂ ನಗರಸಭೆಯು ಮನೆಗಳನ್ನು ತೆರವುಗೊಳಿಸಲು ಹೊರಟಿರುವುದು ಸರಿಯಲ್ಲ. ಇದು ಯಾವುದೋ ಕಾಣದ ಕೈಗಳ ದೂರಾಲೋಚನೆಯಾಗಿದೆ. ತಾಲ್ಲೂಕಿನಲ್ಲಿ ಸುಮಾರು 1500 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ತಲೆಕೆಡಿಸಿಕೊಳ್ಳದ ತಾಲ್ಲೂಕು ಆಡಳಿತ ಈ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ಸರ್ಕಾರದಿಂದ ಮಂಜೂರಾಗಿರುವ ಈ ಬಡವರ ನಿವೇಶನಗಳನ್ನು ತೆರವುಗೊಳಿಸಲು ನೋಟಿಸ್ ನೀಡಿರುವುದು ಎಷ್ಟು ಸರಿ ಎಂದರು.
ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಸೊಪ್ಪ್ಪುಗಣೇಶ್ ಮಾತನಾಡಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು ಪೊಲೀಸ್ ಇಲಾಖೆಯು ನಗರಠಾಣೆಯಲ್ಲಿ ಇನ್ಸ್‍ಪೆಕ್ಟರ್ ಸಬ್‍ಇನ್ಸ್‍ಪೆಕ್ಟರ್‍ಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಜೆ.ಡಿ.ಎಸ್ ಕಾರ್ಯಾಧ್ಯಕ್ಷ, ಶಿವಸ್ವಾಮಿ, ನಗರಾಧ್ಯಕ್ಷ ಹರೀಶ್, ವಕೀಲ ಕರುಣಾಕರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
